ಬೆಂಗಳೂರು,ಫೆ.24- ಪಾರ್ಕಿಂಗ್ ಸ್ಥಳದಲ್ಲಿ ಕಾರಿನ ಗಾಜು ಒಡೆದು 2.50 ಲಕ್ಷ ಹಣ ಹಾಗೂ ಎರಡು ಕೈ ಗಡಿಯಾರಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿತ್ತೂರು ಜಿಲ್ಲೆಯ ಶಾಂತಿಪುರ ನಿವಾಸಿ ಸತೀಶ್ (27) ಬಂಧಿತ ಆರೋಪಿ. ಈತನಿಂದ 8.71 ಲಕ್ಷ ರೂ. ಬೆಲೆ ಬಾಳುವ 206 ಗ್ರಾಂ ತೂಕದ ಚಿನ್ನದ ಒಡವೆಗಳು. 47,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ತಿರುಪತಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. 15 ದಿನ ಹೋಟೆಲ್‍ನಲ್ಲಿ ಕೆಲಸ ಮಾಡಿದರೆ, ಇನ್ನು 15 ದಿನ ಬೆಂಗಳೂರು, ಚಿತ್ತೂರಿಗೆ ಬಂದು ಸುತ್ತಾಡಿಕೊಂಡು ಮನೆ ಕಳ್ಳತನ ಮಾಡುವ ವೃತ್ತಿ ಹೊಂದಿದ್ದನು.
ಸೆ.18ರಂದು ರಾತ್ರಿ 8.20ರ ಸುಮಾರಿನಲ್ಲಿ ಚಂದ್ರಾಲೇಔಟ್ ಪೊಲೀಸ್ ವ್ಯಾಪ್ತಿಯಲ್ಲಿ ಟಯೋಟಾ ಪಾರ್ಚೂನರ್ ಕಾರು ನಿಲ್ಲಿಸಿ ಪಿರ್ಯಾದುದಾರರು ಊಟಕ್ಕೆ ಹೋಗಿ ಬರುವಷ್ಟರಲ್ಲಿ ಕಳ್ಳರು ಕಾರಿನ ಗಾಜು ಒಡೆದು ಅದರಲ್ಲಿದ್ದ 2.50ಲಕ್ಷ ರೂ. ಹಣ, ಪಾಸಿಲ್ ಕಂಪೆನಿಯ ಎರಡು ಕೈ ಗಡಿಯಾರಗಳನ್ನು ಕಳವು ಮಾಡಿಕೊಂಡು ಹೋಗಿದ್ದರು.
ಈ ಬಗ್ಗೆ ಪಿರ್ಯಾದುದಾರರು ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್ಸ್‍ಪೆಕ್ಟರ್ ಮನೋಜ್ ಹೋವಳೆ ಮತ್ತು ಸಿಬ್ಬಂದಿ ಕಾರ್ಯಚರಣೆ ಕೈಗೊಂಡು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಆರೋಪಿಯು ಚಂದ್ರಾಲೇಔಟ್ ವ್ಯಾಪ್ತಿಯಲ್ಲಿ ಕಾರಿನ ಗಾಜು ಒಡೆದು ಕಳವು ಮಾಡಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಂದು ಮನೆ ಕಳ್ಳತನ ಮತ್ತು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಮನೆಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯಿಂದ ಒಟ್ಟು 8.71 ಲಕ್ಷ ರೂ. ಬೆಲೆ ಬಾಳುವ 206 ಗ್ರಾಂ ಚಿನ್ನಾಭರಣ ಹಾಗೂ 47,500 ರೂ.ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
