ಬೆಂಗಳೂರು,ಮಾ.8- ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿರುವ ನಮ್ಮ ಕ್ಲಿನಿಕ್ ಸೇವೆ ಶೀಘ್ರದಲ್ಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭವಾಗಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‍ನಲ್ಲಿ ಘೋಷಣೆ ಮಾಡಿರುವ ನಮ್ಮ ಕ್ಲಿನಿಕ್‍ಗಳ ಉಸ್ತುವಾರಿಯನ್ನು ಬಿಬಿಎಂಪಿಯೇ ನೋಡಿಕೊಳ್ಳಲಿದೆ.
ನಗರದ 198 ವಾರ್ಡ್‍ಗಳಲ್ಲಿ ನಮ್ಮ ಕ್ಲಿನಿಕ್‍ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಬಾಲ ಸುಂದರ್ ತಿಳಿಸಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮುನ್ನ ನಗರದ 141 ವಾರ್ಡ್‍ಗಳಲ್ಲಿ 141 ಆರೋಗ್ಯ ಕೇಂದ್ರಗಳು ಕಾರ್ಯಾರಂಭ ಮಾಡಿ ಅದ್ದವು. ಕೊರೊನಾ ನಂತರ 20 ವಾರ್ಡ್‍ಗಳಲ್ಲಿ 20 ಹೊಸ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿತ್ತು. ಹೀಗಾಗಿ 198 ವಾರ್ಡ್‍ಗಳ ಪೈಕಿ 161 ವಾರ್ಡ್‍ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ.
ಇದನ್ನು ಹೊರತುಪಡಿಸಿ ನಗರದಲ್ಲಿ 243 ನಮ್ಮ ಕ್ಲಿನಿಕ್‍ಗಳನ್ನು ತೆರೆಯಲಾಗುವುದು ಎಂದು ಆರೋಗ್ಯಾಧಿಕಾರಿಗಳು ವಿವರಣೆ ನೀಡಿದ್ದಾರೆ.
ಈಗಾಗಲೆ 160 ವಾರ್ಡ್‍ಗಳಲ್ಲಿ ನಮ್ಮ ಕ್ಲಿನಿಕ್‍ಗಳ ಸ್ಥಾಪನೆಗೆ ಜಾಗ ಗುರುತುಪಡಿಸಲಾಗಿದೆ. ಒಂದು ವೇಳೆ ಬಿಬಿಎಂಪಿ ಜಾಗ ಖಾಲಿ ಇಲ್ಲದಿದ್ದರೆ ಬಾಡಿಗೆಗೆ ಜಾಗ ಪಡೆಯುವಂತೆ ಆರೋಗ್ಯ ಇಲಾಖೆ ನಮಗೆ ಸೂಚನೆ ನೀಡಿದೆ. ಆದರಂತೆ ಉಳಿದ ಜಾಗಗಳನ್ನು ಗುರುತುಪಡಿಸುವ ಕಾರ್ಯ ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಅವರು ವಿವರಿಸಿದರು.
ಸಧ್ಯ 198 ವಾರ್ಡ್‍ಗಳಿದ್ದು, ಅಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ವಾರ್ಡ್ ಪುನರ್‍ವಿಂಗಡಣೆಯಾದ ನಂತರ ಹೆಚ್ಚಾಗುವ ವಾರ್ಡ್‍ಗಳಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆ ಮಾಡಲಾಗುವುದು ಎಂದು ಅವರು ಹೇಳಿದರು.
ನಮ್ಮ ಕ್ಲಿನಿಕ್ ಸ್ಥಾಪನೆ ಉದ್ದೇಶ:
ನಗರದ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಬೇಕು ಎಂಬ ಉದ್ದೇಶದಿಂದ ನಮ್ಮ ಕ್ಲಿನಿಕ್‍ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ನಗರದಲ್ಲಿ ನೂರಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ರೆಫರೆಲ್ ಆಸ್ಪತ್ರೆಗಳು ಇದ್ದರೂ ಸ್ಲಂ ನಿವಾಸಿಗಳು ಆರೋಗ್ಯ ಕೇಂದ್ರಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಬೇಕು ಎನ್ನುವುದೇ ಯೋಜನೆಯ ಪ್ರಮುಖ ಉದ್ದೇಶ.
ಹೇಗಿರಲಿದೆ ನಮ್ಮ ಕ್ಲಿನಿಕ್‍ಗಳ ಸೇವೆ; ನಗರದಲ್ಲಿ ಸ್ಥಾಪನೆಯಾಗಲಿರುವ ನಮ್ಮ ಕ್ಲಿನಿಕ್‍ಗಳು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿವೆ.
ನಮ್ಮ ಕ್ಲಿನಿಕ್‍ಗಳಲ್ಲಿ ನಾಲ್ಕು ಸಿಬ್ಬಂದಿಗಳನ್ನು ಒಳಗೊಂಡು ಮೂರು ಶಿಫ್ಟ್‍ಗಳಲ್ಲಿ ವೈದ್ಯರು ಸೇವೆ ಸಲ್ಲಿಸಲಿದ್ದಾರೆ. ಆಯಾ ಶಿಫ್ಟ್‍ಗಳಲ್ಲಿ ಎಂಬಿಬಿಎಸ್ ವೈದ್ಯೆ, ಸ್ಟಾಫ್ ನರ್ಸ್, ಅರೆಕಾಲಿಕೆ ವೈದ್ಯೆ ಹಾಗೂ ಡಿ ಗ್ರೂಫ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುವುದು.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ನಮ್ಮ ಕ್ಲಿನಿಕ್‍ಗಳನ್ನು ಆರಂಭಿಸಲಾಗುತ್ತಿದೆ. ನಮ್ಮ ಕ್ಲಿನಿಕ್‍ಗಳಿಗೆ ಬರುವ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲವೆ ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುವುದು.
