25 ಭ್ರಷ್ಟ ಅಧಿಕಾರಿಗಳ ಮೇಲೆ FIR ದಾಖಲಿಸಲು ರಾಜ್ಯ ಸರ್ಕಾರ ಅನುಮತಿ

Social Share

ಬೆಂಗಳೂರು, ಜ.27- ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂ. ಬೆಲೆ ಬಾಳುವ ಜಮೀನನ್ನು ಕಬಳಿಸಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಿಗಳ ಮೇಲೆ ಎಫ್‍ಐಆರ್ ದಾಖಲಿಸಲು ಸರ್ಕಾರ ಕೊನೆಗೂ ಅನುಮತಿ ನೀಡಿದೆ. 40 ಎಫ್‍ಐಆರ್ ದಾಖಲು ಮಾಡಲು ಅನುಮತಿ ಕೇಳಿದ್ದ ಎಸಿಬಿಗೆ ರಾಜ್ಯ ಸರ್ಕಾರ 25 ಅಧಿಕಾರಿಗಳ ಮೇಲೆ ಎಫ್‍ಐಆರ್ ದಾಖಲು ಮಾಡಲು ಅನುಮತಿ ನೀಡಿದೆ.
ಇದರಿಂದಾಗಿ ಎಸಿಬಿ ದಾಳಿ ವೇಳೆ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದ ನುಂಗಣ್ಣರಿಗೆ ಬಂಧನದ ಭೀತಿ ಎದುರಾಗಿದೆ. ನಗರಾಭಿವೃದ್ಧಿ ಇಲಾಖೆಯಿಂದ 25 ಪ್ರಕರಣ ದಾಖಲು ಮಾಡಲು ಅನುಮತಿ ದೊರೆತಿದೆ. ದಾಳಿ ವೇಳೆ ಸುಮಾರು 200 ಕೋಟಿಗೂ ಅಧಿಕ ಅವ್ಯವಹಾರವನ್ನು ಎಸಿಬಿ ಪತ್ತೆ ಮಾಡಿತ್ತು. ಕಳೆದ ವರ್ಷ ಎಸಿಬಿ ಬಿಡಿಎ ಕಚೇರಿ ಮೇಲೆ ಬೃಹತ್ ದಾಳಿ ನಡೆಸಿತ್ತು.
ಸದ್ಯ ಬೇರೆ ಬೇರೆ ಕಡೆ ವರ್ಗಾವಣೆಯಾಗಿರುವ ಅಧಿಕಾರಿಗಳು ಸೇರಿದಂತೆ ಕೆಎಸ್‍ಎ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಎಫ್‍ಡಿಎ ಅಧಿಕಾರಿಗಳ ಸೇರಿ 25 ಭ್ರಷ್ಟ ಅಧಿಕಾರಿಗಳ ಮೇಲೆ ಎಫ್‍ಐಆರ್ ದಾಖಲಾಗುವ ಸಾಧ್ಯತೆಯಿದೆ. ನಕಲಿ ದಾಖಲಾತಿ ಸೃಷ್ಟಿಸಿ ಅರ್ಹರಲ್ಲದವರಿಗೆ ಸೈಟ್ ಮಂಜೂರು, ಒಂದೇ ಸೈಟ್ ಇಬ್ಬರಿಗೂ ಮಂಜೂರು ಸೇರಿದಂತೆ ಹಲವು ಆಕ್ರಮಗಳು ದಾಳಿ ವೇಳೆ ಪತ್ತೆಯಾಗಿತ್ತು. ಎಸಿಬಿ ಅಧಿಕಾರಿಗಳು 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.
ಭಾರೀ ಭ್ರಷ್ಟಾಚಾರಕ್ಕಾಗಿ ಅಕ್ರಮವಾಗಿ ಭೂ ದಾಖಲೆಗಳನ್ನು ತಿರುಚಿ, ನಕಲಿ ದಾಖಲಾತಿಗಳ ಸೃಷ್ಟಿಸಿರುವುದರಲ್ಲಿ ಬಿಡಿಎ ಅಧಿಕಾರಿಗಳು ಹಾಗೂ ಸಿಬ್ಬಂದಿ ತೊಡಗಿಸಿಕೊಂಡಿರುವುದನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದರು. ಅಲ್ಲದೆ, ಒಂದೇ ನಿವೇಶನವನ್ನು ಅನೇಕ ಜನರಿಗೆ ಹಂಚಿಕೆ ಮಾಡಿ, ತದನಂತರ ಅವರನ್ನು ಕೋರ್ಟ್‍ಗೆ ಹೋಗುವಂತೆ ಹೇಳಲಾಗಿದೆ.
ಉಪಕಾರ್ಯದರ್ಶಿಗಳ ಕಚೇರಿ, ವಿಶೇಷ ಭೂಸ್ವಾೀನ ಮತ್ತಿತರರ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಒಂದೇ ಆಸ್ತಿಯಲ್ಲಿ ವಿವಿಧ ವ್ಯಕ್ತಿಗಳಿಗೆ ದಾಖಲೆ ನೀಡಿರುವುದು ಪತ್ತೆಯಾಗಿದೆ. ಕೆಆರ್ ಪುರಂನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ 35 ನಿವೇಶನ ಹಂಚಿಕೆ ಮಾಡಿರುವುದು ಪತ್ತೆಯಾಗಿದ್ದವು. ಅರ್ಕಾವತಿ ಲೇಔಟ್, ಕೆಂಪೇಗೌಡ ಲೇಔಟ್, ಚಂದ್ರಾ ಲೇಔಟ್ ಮತ್ತಿತರ ಕಡೆಗಳಲ್ಲಿ ಅಕ್ರಮವಾಗಿ ಬಿಡಿಎ ನಿವೇಶನ ಹಂಚಿಕೆ ಮಾಡಿರುವುದನ್ನು ಕೂಡಾ ಅಧಿಕಾರಿಗಳು ಪತ್ತೆ ಮಾಡಲಾಗಿತ್ತು.
ಜಮೀನು ಮಂಜೂರು ಅಕ್ರಮ, ಅಧಿಕಾರಿಗಳಿಂದ ಲಂಚಕ್ಕಾಗಿ ಬೇಡಿಕೆ ಸೇರಿದಂತೆ ವಿವಿಧ ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಸಂಘವೊಂದಕ್ಕೆ 34 ಸೈಟ್ ಮಂಜೂರು ಮಾಡಿರುರುವುದು ಬೆಳಕಿಗೆ ಬಂದಿದೆ. ನಗರದ ಪೂರ್ವ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಇರುವ ಅಸೊಶಿಯೇಷನ್‍ಗೆ ಅರ್ಹತೆ ಇಲ್ಲದಿದ್ದರೂ 34 ನಿವೇಶನಗಳ ಹಂಚಿಕೆ ಮಾಡಲಾಗಿದೆ. ಇದರಿಂದ ಬಿಡಿಎಗೆ ಕೋಟ್ಯಾಂತರ ರೂ. ನಷ್ಟ ಉಂಟಾಗಿದೆ. ಒಂದೇ ನಿವೇಶನವನ್ನು ಇಬ್ಬರಿಗೆ ಮಂಜೂರು ಮಾಡಿರುವ ಅಕ್ರಮ ಸಹ ಪತ್ತೆಯಾಗಿದ್ದವು.
ಎಸಿಬಿಗೆ ಸೈಟ್ ವಿಚಾರದ ಕುರಿತು ದೂರುಗಳು ಬಂದಿದ್ದವು. ಸೈಟ್ ಹಂಚಿಕೆಯಲ್ಲಿ ಅಕ್ರಮ, ಕ್ರಯ ಪತ್ರ ನೀಡಲು ಲಂಚ, ನಾಲ್ಕು ವರ್ಷಗಳಿಂದ ಅಲೆದಾಡಿದರೂ ದಾಖಲೆ ನೀಡದೆ ಕಿರಿಕಿರಿ, ಕಾರ್ನರ್ ಸೈಟ್ ವಿಚಾರವಾಗಿ ಹಲವು ತಕರಾರು ಸೇರಿದಂತೆ ವಿವಿಧ ದೂರಗಳ ಹಿನ್ನೆಲೆ ದಾಳಿ ಮಾಡಲಾಗಿತ್ತು.ದಾಳಿಯ ವೇಳೆ ಎಸಿಬಿ ಅಧಿಕಾರಿ ಗಳು ಟೊಯೋಟಾ ಫಾರ್ಚೂನರ್ ಕಾರಿನಲ್ಲಿ ಬ್ಯಾಗ್‍ಗಟ್ಟಲೇ ದಾಖಲೆಗಳನ್ನು ಪತ್ತೆ ಹಚ್ಚಿದ್ದರು.
 
ಅಧಿಕಾರಿಗಳಿಗೆ ನೋಟಿಸ್: ಬಿಡಿಎ ಭ್ರಷ್ಟಾಚಾರ ಸಂಬಂಧ ಕೆಲವು ಕಡತಗಳನ್ನು ಬಿಡಿಎ ಅಧಿಕಾರಿಗಳು ನೀಡಿರಲಿಲ್ಲ. ಈ ಸಂಬಂಧ ಕಡತಗಳು ಹಾಗೂ ಮಾಹಿತಿ ನೀಡುವಂತೆ ಕೆಲ ಅಧಿಕಾರಿಗಳಿಗೂ ನೋಟಿಸ್ ನೀಡಲಾಗಿತ್ತು.
ಏನಿದು ಪ್ರಕರಣ: ಎಸಿಬಿ ಅಧಿಕಾರಿಗಳು ಬಿಡಿಎ ಕೇಂದ್ರ ಕಚೇರಿ ಮತ್ತು ವಲಯ ಕಚೇರಿಗಳ ಮೇಲೆ ದಾಳಿ ನಡೆಸಿದ ವೇಳೆ ಬಿಡಿಎ ಅಧಿಕಾರಿಗಳು ನಿವೇಶನ ಹಂಚಿಕೆ ಹಾಗೂ ಭೂಮಿ ಸ್ವಾೀಧಿನಪಡಿಸಿಕೊಂಡಿರುವ ಮಾಲೀಕರಿಗೆ ಪರಿಹಾರ ನೀಡುವಲ್ಲಿ ಭಾರೀ ಭ್ರಷ್ಟಾಚಾರವೆಸಗಿರುವ ದಾಖಲೆ ಕಲೆಹಾಕಿದ್ದರು.
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎಂಟು ನಿವೇಶನಗಳು ನೋಂದಣಿ ಆಗಿರುವುದು, ಅನಾಮಿಕ ವ್ಯಕ್ತಿಗಳ ಹೆಸರಿನಲ್ಲಿ ನಿವೇಶನ ನೋಂದಣಿ ಮಾಡಿರುವುದು ಹಾಗೂ ಒಂದೇ ನಿವೇಶನವನ್ನು ಮೂರು ಅಥವಾ ನಾಲ್ಕು ಮಂದಿಗೆ ನೋಂದಣಿ ಮಾಡಿರುವುದು ಬೆಳಕಿಗೆ ಬಂದಿತ್ತು. ಇದಲ್ಲದೆ, ಮೂಲ ರೈತರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ಅಕ್ರಮ ಮತ್ತು ಕಾನರ್ರ ಸೈಟು ಹಂಚಿಕೆಯಲ್ಲಿ ದಲ್ಲಾಳಿ ಗಳ ಮೂಲಕ ಭಾರಿ ಭ್ರಷ್ಟಾಚಾರವೆಸಗಿರುವುದನ್ನು ಬಯಲಿಗೆಳೆದಿದ್ದರು.
ಎಫ್‍ಐಆರ್ ದಾಖಲು: ನಾಲ್ವರು ಉಪ ನಿರ್ದೇಶಕರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು ಡಿಎಸ್-1, ಡಿಎಸ್-2, ಡಿಎಸ್-3, ಮತ್ತು ಡಿಎಸ್-4 ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಕೇಸ್ ಹಾಕಲಾಗಿದೆ. ಮಧ್ಯವರ್ತಿಗಳು ಮತ್ತು ಇತರರ ವಿರುದ್ಧವೂ ಎಫ್‍ಐಆರ್‍ದಾಖಲಾಗಿಸಲಾಗಿದೆ.
ಕಲಂ 7(ಎ), 7ಎ, 8,12,13(1)ಎ,13(2) ಹಾಗೂ ಪಿಸಿ ಆಕ್ಟ್ 1988 ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಎಫ್‍ಐಆರ್‍ನಲ್ಲಿ ನಿರ್ದಿಷ್ಟ ಅಕಾರಿ ಹೆಸರನ್ನು ಎಸಿಬಿ ಉಲ್ಲೇಖಿಸಿಲ್ಲ. ಅಧಿಕಾರಿಗಳ ಹುದ್ದೆಗಳ ಮೇಲಷ್ಟೆ ಕೇಸ್ ದಾಖಲಾಗಿದೆ.
ಎಸಿಬಿ ಎಫ್‍ಐಆರ್‍ನಲ್ಲಿರುವ ಅಂಶಗಳು: ಬಿಡಿಎ ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ಕಡತಗಳ ನಿರ್ವಹಣೆ ಮಾಡಿದ್ದು, ಕಾನೂನು ಬಾಹಿರವಾಗಿ ಕೆಲವು ವ್ಯಕ್ತಿಗಳಿಗೆ ನಿವೇಶನಗಳ ಹಂಚಿಕೆ ಮಾಡಲಾಗಿದೆ. ನಿವೇಶನಗಳ ಹಂಚಿಕೆ ವೇಳೆ ಸಿಎ ರಿಜಿಸ್ಟ್ರಾರ್‍ಗಳಲ್ಲಿ ಅಕ್ರಮ ಮತ್ತು ಅನಧಿಕೃತವಾಗಿ ತಿದ್ದುಪಡಿ ಮಾಡಿ ಬೇಕಾದವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಎಫ್‍ಐಆರ್‍ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಅವರಿಗೆ ಬೇಕಾದವರಿಗೆ ಅನುಕೂಲ ಮಾಡಿಕೊಡುತ್ತಿರುವುದು ತಿಳಿದುಬಂದಿದೆ.
ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಹಂಚಿಕೆಯಾದ ನಿವೇಶನಗಳು ಅನಕೃತವಾಗಿ ಪುನಃ ಬೇರೆ ವ್ಯಕ್ತಿಗಳಿಗೆ ಹಂಚಿಕೆ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಸಾರ್ವಜನಿಕರಿಂದ ಸಂಗ್ರಹಿಸಿದ ನಿಗದಿತ ಹಣವನ್ನು ನಿಗದಿತ ಸಮಯದಲ್ಲಿ ಸರ್ಕಾರದ ಖಜÁನೆಗೆ ಜಮೆ ಮಾಡಿಲ್ಲ. ಅಲ್ಲದೆ, ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ ಇಲ್ಲ. ಪ್ರಾಕಾರದ ನಿಯಮಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಹಂಚಿಕೆ ಮಾಡಲಾಗಿದೆ. ಇದರಿಂದ ಬಿಡಿಎ ಹಾಗೂ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಎಫ್‍ಐಆರ್‍ನಲ್ಲಿ ಪ್ರಸ್ತಾಪಿಸಲಾಗಿದೆ.

Articles You Might Like

Share This Article