ಬೆಂಗಳೂರು,ಆ.30- ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ವರುಣನ ಅಬ್ಬರಕ್ಕೆ ಮೂವರು ಬಲಿಯಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಮೂರ್ನಾಲ್ಕು ದಿನ ರಾಜ್ಯದ ಕೆಲವು ಭಾಗಗಳಲ್ಲಿ ಮತ್ತಷ್ಟು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಎಲ್ಲವನ್ನೂ ತೆಗೆದುಕೊಂಡಿದ್ದೇವೆ ಎಂದರು.
ಕಳೆದ 24 ಗಂಟೆಗಳ ಅವಯಲ್ಲಿ 890 ಮಿಲಿಮೀಟರ್ ಮಳೆಯಾಗಿದ್ದು, 27 ಜಿಲ್ಲೆಗಳಲ್ಲಿ ಇದರ ಪ್ರಮಾಣ ವ್ಯಾಪಕವಾಗಿದೆ. ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವುದರಿಂದ ಕೆಲವು ಕಡೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ರಾಮನಗರ, ಚಾಮರಾಜನಗರ, ಮಂಡ್ಯ ಜಿಲ್ಲೆಯಲ್ಲಿ 9ಮಿಮೀ ಮಳೆಯಾಗಿದೆ. ಕೇವಲ 24 ಗಂಟೆ ಅವಯಲ್ಲಿ 24 ಹಳ್ಳಿಗಳಲ್ಲಿ ಭಾರೀ ಪ್ರಮಾಣದ ಹಾನಿಯಾಗಿದೆ. ರಾಮನಗರದಲ್ಲಿ ಇಬ್ಬರು ಹಾಗೂ ಹಾವೇರಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು.
ಕಳೆದ ಜೂನ್ ತಿಂಗಳಿನಲ್ಲೇ 1187 ಹಳ್ಳಿಗಳಲ್ಲಿ ಮಳೆಯಿಂದ ಹಾನಿಗೊಳಗಾಗಿದ್ದು, ಈವರೆಗೂ ಒಟ್ಟು 29,967 ಮಂದಿಗೆ ತೊಂದರೆಯಾಗಿದ್ದು, ಜೂನ್ ತಿಂಗಳಿನಿಂದ ಈವರೆಗೂ 96 ಜನ ಸಾವನ್ನಪ್ಪಿದ್ದಾರೆ ಎಂದು ಅಂಕಿ-ಅಂಶಗಳ ವಿವರ ನೀಡಿದರು.
ಸುಮಾರು 9555 ಜನರನ್ನು ಸ್ಥಳಾಂತರ ಮಾಡಲಾಗಿದೆ. ಜೂನ್ನಿಂದ ಈವರೆಗೂ 5.8ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದ್ದು, 1471 ಸೇತುವೆಗಳು ಹಾನಿಗೊಳಗಾಗಿವೆ, 2221 ವಿದ್ಯುತ್ ಕಂಬಗಳು, 2223 ಕಿ.ಮೀ.ರಸ್ತೆ ಹಾಳಾಗಿದೆ ಎಂದು ಅಶೋಕ್ ಮಾಹಿತಿ ನೀಡಿದರು.
ಕೇಂದ್ರದಿಂದ ಎನ್ಡಿಆರ್ಎಫ್ ಅಡಿ 1012 ಕೋಟಿ ಹಣ ಬರಬೇಕು. ರಾಜ್ಯಕ್ಕೆ ಬಾಕಿ ಇರುವ ಇನ್ಫುಟ್ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಲಾಗಿದೆ. ಆದಷ್ಟು ಶೀಘ್ರ ಹಣ ಬಿಡುಗಡೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮಳೆಯಿಂದ ಹಾನಿಗೊಳಗಾಗಿರುವ ಪರಿಹಾರದ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಹೆಚ್ಚಿನ ಅನುದಾನ ಒದಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಜುಲೈನಿಂದ ಮಳೆಯಿಂದಾಗಿ 7647 ಕೋಟಿ ನಷ್ಟವಾಗಿದೆ.
ಕೇಂದ್ರದಿಂದ ನಮಗೆ ಎನ್ಡಿಆರ್ಎಫ್ನಡಿ 1012 ಕೋಟಿ ಬಂದರೆ ತಕ್ಷಣವೇ ಸಂತ್ರಸ್ತರಿಗೆ ಬಿಡುಗಡೆ ಮಾಡಲಾಗುವುದು. ಜುಲೈ ಮತ್ತು ಆಗಸ್ಟ್ ತಿಂಗಳ ಮಧ್ಯದಲ್ಲಿ 3,10,083 ಹೆಕ್ಟೇರ್ ಕೃಷಿ ಬೆಳೆ, 20,195 ಹೆಕ್ಟೇರ್ ತೋಟಗಾರಿಕೆ, 20,551 ಹೆಕ್ಟೇರ್ ಬಹುವಾರ್ಷಿಕ ಬೆಳೆ, 0.84 ಹೆಕ್ಟೇರ್ ಮೆಕ್ಕಲು ಭೂಮಿ, 0.13 ಹೆಕ್ಟೇರ್ ರೇಷ್ಮೆ, 467 ಜಾನುವಾರು, 24,408 ಮನೆಗಳು, 22,734 ಕಿ.ಮೀ. ರಸ್ತೆ, 4,159 ರಾಜ್ಯ ಮತ್ತು ಜಿಲ್ಲಾ ಹೆದ್ದಾರಿ ನಷ್ಟವಾಗಿದೆ ಎಂದು ವಿವರಿಸಿದರು.
ರಾಜ್ಯದ ಒಟ್ಟು 7 ಕಡೆ ಹೊಸ ಕ್ಯಾಂಪ್ಗಳನ್ನು ತೆರೆಯಲಾಗಿದೆ. ರಾಜ್ಯಾದ್ಯಂತ ಸಂತ್ರಸ್ತರ ರಕ್ಷಣೆಗಾಗಿ ಐದು ಎನ್ಡಿಆರ್ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಈಗಾಗಲೇ ಪರಿಹಾರ ಕಾರ್ಯಕ್ಕೆ 250 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಕೇಂದ್ರದಿಂದಲೂ ನಮಗೆ ಎಲ್ಲಾ ರೀತಿಯ ನೆರವು ಸಿಗಲಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಹೆಚ್ಚಿನ ಪರಿಹಾರವನ್ನು ಕೊಟ್ಟಿದ್ದೇವೆ. ಸಂತ್ರಸ್ತರಿಗೆ ನೇರವಾಗಿ ಅವರ ಖಾತೆಗೆ ಪರಿಹಾರ ನೀಡಲು ಜಿಲ್ಲಾಕಾರಿಗಳಿಗೆ ಸೂಚಿಸಲಾಗಿದೆ.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ನೀರು ನಿಂತಿರುವುದು ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಇದು ವೈಜ್ಞಾನಿಕವಾಗಿ ನಡೆಸಿರುವ ಕಾಮಗಾರಿ ಎಂದು ಅಶೋಕ್ ಸಮರ್ಥಿಸಿಕೊಂಡರು.