25,000 ಕೋಟಿ ರೂ. ಹಗರಣದ ಬಗ್ಗೆ ಸಿಬಿಐ ತನಿಖೆಗಾಗಿ ಪಿಐಎಲ್ ಸಲ್ಲಿಸಿ ಅಣ್ಣಾ ಹಜಾರೆ

Anna-Hazare-01

ಮುಂಬೈ, ಜ.4-ಭ್ರಷ್ಟಾಚಾರ ಮತ್ತು ಲಂಚಾವತಾರಗಳ ವಿರುದ್ಧ ರಾಷ್ಟ್ರವ್ಯಾಪಿ ದೊಡ್ಡಮಟ್ಟದ ಆಂದೋಲನ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮತ್ತೆ ಸುದ್ದಿಯಲ್ಲಿದ್ದಾರೆ. ಸಹಕಾರಿ ಸಕ್ಕರೆ ಕಾರ್ಖಾನೆಗಳು ನಡೆಸಿರುವ 25,000 ಕೋಟಿ ರೂ. ಹಗರಣದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಅಣ್ಣಾ ಮುಂಬೈ ಹೈಕೋರ್ಟ್‍ನಲ್ಲಿ ಮೂರು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಎನ್‍ಸಿಪಿ ಅಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಮತ್ತು ಅವರ ಹತ್ತಿರದ ಸಂಬಂಧಿಯೂ ಆದ ಮಾಜಿ ನೀರಾವರಿ ಸಚಿವ ಅಜಿತ್ ಪವಾರ್ ಸೇರಿದಂತೆ ಈ ಹಗರಣದಲ್ಲಿ ಶಾಮೀಲಾಗಿರುವ ರಾಜಕಾರಣಿಗಳು ಮತ್ತು ಪ್ರಭಾವಿಗಳ ಪಾತ್ರದ ಬಗ್ಗೆ ವಿಶೇಷ ತನಿಖಾ ತಂಡದಿಂದ (ಎಸ್‍ಐಟಿ) ತನಿಖೆ ನಡೆಸುವಂತೆ ಅಣ್ಣಾ ಅಗ್ರಹಿಸಿದ್ದಾರೆ. ಪವಾರ್ ಪರಿವಾರದ ಈ ಇಬ್ಬರು ಸದಸ್ಯರನ್ನು ಪಿಐಎಲ್‍ನಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.

ಈ ಸಂಬಂಧ ಅಣ್ಣಾ ಎರಡು ಸಿವಿಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್‍ಗಳು) ಮತ್ತು ಸಿಬಿಐ ತನಿಖೆ ಕೋರಿ ಒಂದು ಕ್ರಿಮಿನಲ್ ಪಿಐಎಲ್ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಅಭಯ್ ಓಕಾ ನೇತೃತ್ವದ ಪೀಠವು ಜ.6ರಂದು ಕ್ರಿಮಿನಲ್ ಪಿಐಎಲ್ ವಿಚಾರಣೆಗೆ ದಿನಾಂಕ ನಿಗದಿಗೊಳಿಸಿದೆ.  ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ದುರಾಡಳಿತದ ಮೂಲಕ ಸಾಲದ ಸುಳಿಗೆ ಸಿಲುಕಿಸಲಾಗಿದೆ. ಆನಂತರ ರೋಗಗ್ರಸ್ತ ಘಟಕಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ಸರ್ಕಾರಕ್ಕೆ, ಸಹಕಾರ ವಲಯಕ್ಕೆ ಮತ್ತು ಸಾರ್ವಜನಿಕರಿಗೆ 25,000 ಕೋಟಿ ರೂ.ಗಳ ನಷ್ಟ ಉಂಟು ಮಾಡಲಾಗಿದೆ ಎಂದು ಅವರು ಅರ್ಜಿಗಳಲ್ಲಿ ಆರೋಪಿಸಿದ್ದಾರೆ.

ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಮಾರಾಟ ಮತ್ತು ಅಡಮಾನ ಮೂಡುವ ಮೂಲಕ ಸರ್ಕಾರ ಮತ್ತು ಸಹಕಾರಿ ವಲಯದ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಇದರಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಅಣ್ಣಾ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಅರ್ಜಿಗಳಲ್ಲಿ ಉಲ್ಲೇಖಿಸಿರುವ ಮತ್ತು ನಮೂದಿಸಿರುವ ಅಂಕಿ-ಅಂಶಗಳು ಆರ್‍ಟಿಐ (ಮಾಹಿತಿ ಹಕ್ಕು ಕಾಯ್ದೆ) ಮೂಲಕ ಸಂಗ್ರಹಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin