ನಿಯಮ ಉಲ್ಲಂಘನೆ : 258 ವಾಟರ್ ಟ್ಯಾಂಕರ್ ವಾಹನ ಚಾಲಕರ ವಿರುದ್ಧ ಕೇಸ್

Spread the love

ಬೆಂಗಳೂರು, ಮೇ 28- ವಾಟರ್ ಟ್ಯಾಂಕರ್ ವಾಹನಗಳ ವಿರುದ್ಧ ನಗರ ಪೂರ್ವ ವಿಭಾಗದ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಒಟ್ಟು 258 ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗೆ ನಗರದಲ್ಲಿ ವಾಟರ್ ಟ್ಯಾಂಕರ್ ವಾಹನಗಳಿಂದ ಹೆಚ್ಚಾಗಿ ಅಪಘಾತಗಳು ನಡೆದು ಸಾವುನೋವುಗಳು ಸಂಭವಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಂಚಾರಿ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡು ಸಂಚಾರ ನಿಯಮ ಉಲ್ಲಂಘಿಸಿರುವುದನ್ನು ಪತ್ತೆಹಚ್ಚಿದ್ದಾರೆ.

ವಾಟರ್ ಟ್ಯಾಂಕರ್ ಚಾಲಕರು ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡಿದ ಕಾರಣ ಮಾರಣಾಂತಿಕ ಅಪಘಾತಗಳಾಗಿರುವುದು ಸಹ ಕಂಡುಬಂದಿದೆ. ಅಲ್ಲದೆ ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದಲೂ ಸಾಕಷ್ಟು ದೂರುಗಳು ಕೇಳಿಬಂದಿರುತ್ತವೆ.

ಈ ನಿಟ್ಟಿನಲ್ಲಿ ನಗರ ಸಂಚಾರ ಪೂರ್ವ ವಿಭಾಗದ ಪೊಲೀಸರು ವಾಟರ್ ಟ್ಯಾಂಕರ್ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ 258 ಪ್ರಕರಣ ಗಳನ್ನು ದಾಖಲಿಸಿದ್ದಾರೆ.

ಕುಡಿದು ವಾಹನ ಚಾಲನೆ 4 ಪ್ರಕರಣ, ಸಂಚಾರ ನಿಷೇಧ ರಸ್ತೆಯಲ್ಲಿ ಚಾಲನೆ 28 ಪ್ರಕರಣ, ಟ್ರಾಫಿಕ್ ಸಿಗ್ನಲ್ ಜಂಪ್ 14 ಪ್ರಕರಣ, ಚಾಲನೆ ವೇಳೆ ಮೊಬೈಲ್ ಬಳಕೆ 7 ಪ್ರಕರಣ, ಇನ್ಸುರೆನ್ಸ್ ಇಲ್ಲದೆ ಚಾಲನೆ 1 ಪ್ರಕರಣ, ಡಿಎಲ್ ಇಲ್ಲದೆ ಚಾಲನೆ 2 ಪ್ರಕರಣ, ಸಮವಸ್ತ್ರ ಹಾಕದ 123 ಪ್ರಕರಣ
ಸೇರಿದಂತೆ ಇತರೆ 79 ಪ್ರಕರಣಗಳನ್ನು ವಾಟರ್ ಟ್ಯಾಂಕರ್ ಚಾಲಕರ ವಿರುದ್ಧ ಸಂಚಾರಿ ಪೊಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಶಾಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments