ನವದೆಹಲಿ, ಫೆ.18- ಭಾರತದಲ್ಲಿ ಹೊಸದಾಗಿ 25,920 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ 4,27,80,235ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 43 ದಿನಗಳ ಬಳಿಕ ಮೂರು ಲಕ್ಷಕ್ಕಿಂತ ಕಡಿಮೆ ಪ್ರಮಾಣಕ್ಕಿಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ಮಾಹಿತಿ ನೀಡಿದೆ.
ನಿನ್ನೆ ಒಂದು ದಿನದಲ್ಲಿ 492 ಜನರು ಮೃತಪಟ್ಟಿದ್ದು, ಒಟ್ಟಾರೆ ಕೋವಿಡ್ ಮರಣಗಳ ಪ್ರಮಾಣ 5,10,905ಕ್ಕೇರಿದೆ. ಸತತ 12ನೆ ದಿನ ದೈನಿಕ ಕೋವಿಡ್-19 ಪ್ರಕರಣಗಳ ಸಂಖ್ಯೆ 1 ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಇನ್ನಷ್ಟು ಇಳಿದಿದ್ದು, ಒಟ್ಟಾರೆ ಸೋಂಕು ಪ್ರಕರಣಗಳ ಪೈಕಿ 0.68 ಪ್ರತಿಶತಕ್ಕೆ ತಲುಪಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ಪ್ರಮಾಣ ಮತ್ತಷ್ಟು ಸುಧಾರಿಸಿದ್ದು, ಶೇ.98.12ಕ್ಕೇರಿದೆ ಎಂದು ಸಚಿವಾಲಯ ಹೇಳಿದೆ.
ಕಳೆದ 24 ಗಂಟೆಗಳ ಅವಯಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳಲ್ಲಿ 40,826ರಷ್ಟು ಇಳಿಕೆಯಾಗಿದೆ. ದೈನಿಕ ಪಾಸಿಟಿವಿಟಿ ದರ ಶೇ.2.07ರಷ್ಟು ಮತ್ತು ವಾರದ ಪಾಸಿಟಿವಿಟಿ ದರ ಶೇ.2.76ರಷ್ಟು ದಾಖಲಾಗಿದೆ.
ಕೋವಿಡ್‍ನಿಂದ ಚೇತರಿಸಿಕೊಂಡವರ ಸಂಖ್ಯೆ 4,19,77,238ಕ್ಕೆ ಏರಿಕೆಯಾಗಿದೆ. ಕೋವಿಡ್ ಮರಣ ದರ 1.19 ಪ್ರತಿಶತದಷ್ಟು ದಾಖಲಾಗಿದೆ. ರಾಷ್ಟ್ರವ್ಯಾಪ್ತಿ ಕೋವಿಡ್-19 ಲಸಿಕಾ ಅಭಿಯಾನದಡಿ ಇದುವರೆಗೆ ನೀಡಲಾಗಿರುವ ಕೋವಿಡ್-19 ಲಸಿಕೆಗಳ ಸಂಖ್ಯೆ 174.64 ಕೋಟಿ ಡೋಸ್‍ಗಳನ್ನು ದಾಟಿದೆ ಎಂದು ಸಚಿವಾಲಯ ವಿವರಿಸಿದೆ.
