ಐಜ್ವಾಲ್, ಫೆ.23- ಕಳೆದ ವರ್ಷ ನಡೆದ ದೌರ್ಜನ್ಯಗಳನ್ನು ಎದುರಿಸಿ ಪೋಷಕರೊಂದಿಗೆ ಮ್ಯಾನ್ಮಾರ್‍ನಿಂದ ಪಲಾಯನಗೈದು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದ 29 ಬಾಲಕ ಮತ್ತು ಬಾಲಕಿಯರು 10 ಮತ್ತು 12 ನೇ ತರಗತಿಯ ರಾಜ್ಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು ಸಿದ್ಧರಾಗಿದ್ದಾರೆ. 27 ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆಗೆ ಮತ್ತು ಇಬ್ಬರು 12ನೇ ತರಗತಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಿಜೋರಾಂ ಶಿಕ್ಷಣ ಸಚಿವ ಲಾಲಛಂದಮಾ ರಾಲ್ಟೆ ಬುಧವಾರ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಪೋಷಕರೊಂದಿಗೆ ದಕ್ಷಿಣ ಮಿಜೋರಾಂನ ಸಿಯಾಹಾ ಜಿಲ್ಲೆ ಮತ್ತು ಮ್ಯಾನ್ಮಾರ್ ಗಡಿಯಲ್ಲಿರುವ ರಾಜ್ಯದ ಪೂರ್ವ ಭಾಗದಲ್ಲಿರುವ ಚಂಫೈ ಜಿಲ್ಲೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅವರು ಹೇಳಿದರು. ಕಳೆದ ವರ್ಷ ಫೆಬ್ರವರಿಯಲ್ಲಿ ಮಿಲಿಟರಿ ಮ್ಯಾನ್ಮಾರ್ ನ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅಲ್ಲಿಂದ ಪರಾರಿಯಾದ ಸಾವಿರಾರು ಮ್ಯಾನ್ಮಾರ್ ಪ್ರಜೆಗಳು ಮಿಜೋರಾಂನ ವಿವಿಧ ಭಾಗಗಳಲ್ಲಿ ಎನ್‍ಜಿಒಗಳು ಮತ್ತು ಗ್ರಾಮಸ್ಥರು ಸ್ಥಾಪಿಸಿದ ಸಮುದಾಯ ಭವನಗಳು, ಶಾಲೆಗಳು ಹಾಗೂ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಮಿಜೋರಾಂ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ 10ನೇ ತರಗತಿಯ ಪರೀಕ್ಷೆಗಳನ್ನು ಫೆಬ್ರವರಿ 28 ರಂದು ಮತ್ತು ಮಾರ್ಚ್ 1 ರಂದು 12 ನೇ ತರಗತಿಯ ಪರೀಕ್ಷೆಗಳನ್ನು ಆಫ್‍ಲೈನ್ ಮಾದರಿಯಲ್ಲಿ ನಡೆಸಲು ದಿನಾಂಕ ಘೋಷಣೆ ಮಾಡಿದೆ. ಮ್ಯಾನ್ಮಾರ್ ಪ್ರಜೆಗಳ ಮಕ್ಕಳನ್ನು ಬೋರ್ಡ್ ಪರೀಕ್ಷೆಗಳಿಗೆ ನೋಂದಾಯಿಸಲು ರಾಜ್ಯ ಸರ್ಕಾರವು ಈ ಹಿಂದೆ ಅಧಿಸೂಚನೆಯನ್ನು ಹೊರಡಿಸಿತ್ತು ಎಂದು ರಾಲ್ಟೆ ಹೇಳಿದರು.
ನಾವು ಈ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ನಿರ್ಧರಿಸಿದ್ದೇವೆ. ಅವರು ಸ್ಥಳಾಂತರಗೊಂಡ ಕಾರಣ ಅವರ ವೃತ್ತಿಜೀವನಕ್ಕೆ ಧಕ್ಕೆಯಾಗುವುದನ್ನು ನಾವು ಬಯಸುವುದಿಲ್ಲ. ನಾವು ಕನಿಷ್ಠ ಮಾನವೀಯ ಆಧಾರದ ಮೇಲೆ ಅವರಿಗೆ ಸಹಾಯ ಮಾಡಬೇಕು ಎಂದು ಅವರು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಯ ಪ್ರಕಾರ, ಮ್ಯಾನ್ಮಾರ್ ಆಗಮಿಸಿದ ಸಾವಿರಕ್ಕೂ ಹೆಚ್ಚು ಮಕ್ಕಳು ಮಿಜೋರಾಂನ ವಿವಿಧ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಇಲ್ಲಿಗೆ ಆಗಮಿಸಿದ ಬಹುತೇಕ ಮ್ಯಾನ್ಮಾರ್ ಪ್ರಜೆಗಳು ಚಿನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಇದು ಮಿಜೋಗಳೊಂದಿಗೆ ಜನಾಂಗೀಯ ಸಂಬಂಧವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಿಜೋರಾಂನ ಆರು ಜಿಲ್ಲೆಗಳಾದ ಚಂಫೈ, ಸಿಯಾಹಾ, ಲಾಂಗ್ಟ್ಲೈ, ಸೆರ್ಚಿಪ್, ಹ್ನಾಥಿಯಲ್ ಮತ್ತು ಸೈಚುಯಲ್ ಗಳು, ಮ್ಯಾನ್ಮಾರ್‍ನ ಚಿನ್ ರಾಜ್ಯದೊಂದಿಗೆ 510-ಕಿಮೀ ಉದ್ದದ ಅಂತರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿವೆ.
