3ನೇ ದಿನಕ್ಕೆ ಕಾಲಿಟ್ಟ ಪಂಚಮಸಾಲಿ ಪಾದಯಾತ್ರೆ

ಬೆಂಗಳೂರು, ಜ.16- ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೂಡಲಸಂಗಮದಿಂದ ಬೆಂಗಳೂರು ವರೆಗೆ ಕೈಗೊಂಡಿರುವ ಪಾದಯಾತ್ರೆ ಮೂರನೆ ದಿನಕ್ಕೆ ಕಾಲಿಟ್ಟಿದೆ. ಇಂದು ಕಡೆಕುಪ್ಪೆ ಗ್ರಾಮದಿಂದ ಕುಷ್ಠಗಿ ಕಡೆಗೆ ಪಾದಯಾತ್ರೆ ಹೊರಟಿದ್ದು, ಮಾರ್ಗಮಧ್ಯೆ ಸ್ವಾಮೀಜಿ ಅವರಿಗೆ ಭವ್ಯ ಸ್ವಾಗತ ದೊರೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು, ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ 700ಕಿಮೀ ಐತಿಹಾಸಿಕ ಪಾದಯಾತ್ರೆ ಕೈಗೊಳ್ಳಲಾಗಿದೆ. ಬಜೆಟ್ ಅಧಿವೇಶನ ಆರಂಭವಾಗುವ ಹೊತ್ತಿಗೆ ಬೆಂಗಳೂರು ತಲುಪಲಿದ್ದೇವೆ. ಅಲ್ಲಿ ಲಕ್ಷಾಂತರ ಜನ ಪಂಚಮಸಾಲಿ ಸಮುದಾಯದವರು ಸೇರಿ ನಮ್ಮ ಹಕ್ಕೊತ್ತಾಯ ಮಂಡಿಸುತ್ತೇವೆ.

ನಮ್ಮ ಸಮುದಾಯದಲ್ಲಿ ಹೆಚ್ಚಿನ ಬಡವರಿದ್ದು, 2ಎ ಮೀಸಲಾತಿ ಕಲ್ಪಿಸುವ ಮೂಲಕ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕಿದೆ. ಕೂಡಲೇ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆ ಕರೆದು ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿದರು.

ನಮ್ಮ ಸಮುದಾಯದ ಮುಖಂಡರನ್ನು ಮಂತ್ರಿಮಾಡಿ ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಿ ಎಂದು ಕೇಳಿಲ್ಲ. ಸಮುದಾಯದವರಿಗೆ ಮೀಸಲಾತಿ ದೊರೆತರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂಬ ನಿಟ್ಟಿನಲ್ಲಿ ನಾವು ಈ ಹೋರಾಟ ಆರಂಭಿಸಿದ್ದೇವೆ ಎಂದು ತಿಳಿಸಿದರು.