ನವದೆಹಲಿ, ಜ.18- ಭಾರತಕ್ಕೆ ಅತ್ಯುತ್ತಮ ಯುಗ ಬರಲಿದ್ದು, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ದೇಶದ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿರುವ ರಾಷ್ಟ್ರೀಯ ಹಾಗೂ ರಾಜ್ಯ ಪದಾಧಿಕಾರಿಗಳು ಮತ್ತು ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಅವರು ಈ ಕರೆ ನೀಡಿದ್ದಾರೆ.
ಸಮಾಜದ ಪ್ರತಿಯೊಂದು ವರ್ಗವನ್ನು ತಲುಪಲು ಮುಂದಾಗಬೇಕು ಎಂದರು. 2047ರ ವೇಳೆಗೆ ಭಾರತ ನಂ.1 ಆರ್ಥಿಕತೆಯ ರಾಷ್ಟ್ರವಾಗಲು ಈಗಾಗಲೇ ಅದರ ಕಡೆ ನಾವು ಕಾರ್ಯೋನ್ಮುಖರಾಗಿದ್ದೇವೆ. ಈ ಅಮೃತಕಾಲವನ್ನು ಕರ್ತವ್ಯದ ಯುಗವಾಗಿ ಪರಿವರ್ತಿಸಬೇಕು ಎಂದು ಹುರಿದುಂಬಿಸಿದರು.
ಕಲಬುರಗಿಗೆ ನಾಳೆ ಪ್ರಧಾನಿ ಮೋದಿ ಭೇಟಿ, ಹೊಸ ದಾಖಲೆಗೆ ಮುನ್ನುಡಿ
ಅಲ್ಪ ಸಂಖ್ಯಾತರು, ದಲಿತ, ಬುಡಕಟ್ಟು ಸೇರಿದಂತೆ ಸಮಾಜದ ಕಟ್ಟಕಡೆಯ ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮುಸಲ್ಮಾನರನ್ನು ಟೀಕಿಸುವುದನ್ನು ಕೂಡಲೇ ನಿಲ್ಲಿಸಿ ಎಂದು ಸಲಹೆ ನೀಡಿದ್ದಾರೆ.
ಚುನಾವಣೆ ಬದಿಗೊತ್ತಿ ಸಮಾಜದ ಪ್ರತಿಯೊಂದು ವರ್ಗಕ್ಕೂ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.ಇನ್ನು ಕೇವಲ 400 ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಪ್ರತಿಯೊಂದು ವಿಭಾಗಕ್ಕೂ ಸಂಪೂರ್ಣ ಭಾವದಿಂದ ಸೇವೆ ಸಲ್ಲಿಸಿದ ತೃಪ್ತಿ ಅವರಿಗೆ ಮನದಟ್ಟಾಗಬೇಕು ಎಂದು ಹೇಳಿದ್ದಾರೆ.
ವಿಶ್ವವಿದ್ಯಾನಿಲಯಗಳು, ಚರ್ಚ್ಗಳು ಸೇರಿದಂತೆ ವೃತ್ತಿಪರರನ್ನು ಭೇಟಿಯಾಗಿ ಅವರ ಸಲಹೆಗಳನ್ನು ಪಡೆದು ಅದನ್ನು ಈಡೇರಿಸುವ ಪ್ರಯತ್ನ ನಡೆಸಬೇಕು ಎಂದು ತಿಳಿಸಿದ್ದಾರೆ.ಅತಿಯಾದ ಆತ್ಮವಿಶ್ವಾಸದಿಂದ ಬೀಗಬೇಡಿ ಎಂದು ಎಚ್ಚರಿಸಿದ ಅವರು, ನಮ್ಮ ಕಾರ್ಯಕ್ರಮಗಳು ಜನಪರವಾಗಿರಬೇಕು. ಜನರ ಕಲ್ಯಾಣಕ್ಕಾಗಿರಬೇಕು ಎಂದು ತಿಳಿಸಿದರು.ಯುವ ಸಮುದಾಯವನ್ನು ಎಚ್ಚರಿಸಿ ಅವರನ್ನು ಮುಂದಿನ ಸವಾಲುಗಳಿಗೆ ಸಿದ್ಧಪಡಿಸಬೇಕು ಎಂದು ಹೇಳಿದರು.
#2ndDay, #BJP, #NationalExecutiveMeeting,