ಖಾಸಗಿ ಲ್ಯಾಬ್‍ನ ಸ್ವಾಬ್ ಸ್ಯಾಂಪಲ್‍ ಸರ್ಕಾರಿ ಆಸ್ಪತ್ರೆಯಲ್ಲಿ ಟೆಸ್ಟ್ : ಮೂವರು ಅರೆಸ್ಟ್

ಬೆಂಗಳೂರು,ಮೇ.7-ಖಾಸಗಿ ಲ್ಯಾಬ್‍ನ ಸ್ವಾಬ್ ಸ್ಯಾಂಪಲ್‍ಗಳನ್ನು ಸರ್ಕಾರಿ ಆಸ್ಪತ್ರೆಗೆ ತಂದು ಅಕ್ರಮವಾಗಿ ಪರೀಕ್ಷೆ ನಡೆಸಿ ಹಣ ಸಂಪಾದನೆ ಮಾಡುತ್ತಿದ್ದ ಸರ್ಕಾರಿ ಜನರಲ್ ಆಸ್ಪತ್ರೆಯ ಮೂವರು ಸಿಬ್ಬಂದಿಗಳು ಹಾಗೂ ಖಾಸಗಿ ಲ್ಯಾಬ್‍ನ ಒಬ್ಬ ಆರೋಪಿಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಎಂಟನೆ ಮೈಲಿಗಲ್ಲು ನಿವಾಸಿ ಪದ್ಮನಾಭ, ಮತ್ತಿಕೆರೆಯ ಸತೀಶ್, ಅಟ್ಟೂರು ಬಡಾವಣೆಯ ಪುನೀತ್ ಹಾಗೂ ಯಲಹಂಕ ಭವಿರೆಡ್ಡಿ ಬಂಧಿತ ಆರೋಪಿಗಳು.

ಯಲಹಂಕದ ಜನರಲ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನಿಷಿಯನ್ಸ್‍ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರು ಆರೋಪಿಗಳು ಖಾಸಗಿ ಲ್ಯಾಬ್‍ನಲ್ಲಿ ಸಂಗ್ರಹವಾಗುವ ಸ್ವಾಬ್ ಸ್ಯಾಂಪಲ್‍ಗಳನ್ನು ಸರ್ಕಾರಿ ಆಸ್ಪತ್ರೆಗೆ ತಂದು ಪರೀಕ್ಷಿಸುತ್ತಿದ್ದರು.

ಒಂದು ಸ್ವಾಬ್ ಪರೀಕ್ಷೆಗೆ 100 ರೂ. ಹಣ ಸಂಗ್ರಹಿಸುತ್ತಿದ್ದರೂ ಎನ್ನಲಾಗಿದೆ. ಕಳೆದ ಡಿಸಂಬರ್ ತಿಂಗಳಿನಿಂದ ಆರೋಪಿಗಳು ಈ ಕೃತ್ಯವೆಸಗುತ್ತಿದ್ದರೂ ಎನ್ನಲಾಗಿದೆ. ಈ ಕುರಿತಂತೆ ಡಾ.ಚೇತನ್‍ಕುಮಾರ್ ಎಂಬುವರು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಖಾಸಗಿ ಲ್ಯಾಬ್‍ನ ಸತೀಶ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ. ಕೊಡಿಗೆಹಳ್ಳಿಯಲ್ಲಿ ಸಾಯಿಕೃಪಾ ಲ್ಯಾಬ್‍ನಲ್ಲಿ ಸಾರ್ವಜನಿಕರು ನೀಡುವ ಸ್ವಾಬ್ ಸ್ಯಾಂಪಲ್‍ಗಳನ್ನು ಅಕ್ರಮವಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸುತ್ತಿದ್ದರು ಎನ್ನಲಾಗಿದೆ.

ಪ್ರತಿನಿತ್ಯ 30 40 ಸ್ಯಾಂಪಲ್‍ಗಳನ್ನು ಅಕ್ರಮವಾಗಿ ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Sri Raghav

Admin