ಬೆಂಗಳೂರು,ಜ.29- ಕಾಲೇಜು ವಿದ್ಯಾರ್ಥಿಗಳು, ಸೆಲಿಬ್ರಿಟಿಗಳು ಹಾಗೂ ಉದ್ಯಮಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ನೈಜೀರಿಯಾ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಗೋವಿಂದಪುರ ಠಾಣೆ ಪೊಲೀಸರು ಮೂರು ಕೋಟಿ ರೂ. ಮೌಲ್ಯದ ಮಾದಕದ್ರವ್ಯ ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾ ಮೂಲದ ಸಿಕ್ಟಸ್ ಉಚೇಕ್ (30) ಹಾಗೂ ಚುಕುಬೆಮ್ ಹೆನ್ರಿ(34) ಬಂತ ಆರೋಪಿಗಳು. ಹೊರಮಾವಿನಲ್ಲಿರುವ ನ್ಯೂರಾಜಣ್ಣ ಬಡಾವಣೆಯಲ್ಲಿ ವಾಸಿಸುತ್ತಿದ್ದ ಆರೋಪಿಗಳು ಎಚ್‍ಬಿಆರ್ ಬಡಾವಣೆ 5ನೇ ಹಂತದಲ್ಲಿರುವ ಅಂಬೇಡ್ಕರ್ ಮೈದಾನದ ಬಳಿ ಸೆಲಿಬ್ರಿಟಿಗಳು, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉದ್ಯಮಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗೋವಿಂದಪುರ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಮೂರು ಕೋಟಿ ರೂ. ಮೌಲ್ಯದ 1.5 ಕೆಜಿ ಎಂಡಿಎಂಎ ಕ್ರಿಸ್ಟಲ್, 120 ಗ್ರಾಂ ಎಂಡಿಎಂಎ ಕಪ್ಪು , ಎರಡು ಪ್ಲಾಸ್ಟಿಕ್ ಕ್ಯಾನ್‍ಗಳಲ್ಲಿ ತುಂಬಿಟ್ಟಿದ್ದ 16.5 ಕೆಜಿ ತೂಕದ ಎಂಡಿಎಂಎ ಮಿಕ್ಸ್ ವಾಟರ್, 300 ಗ್ರಾಂ ವೀಡ್ ಆಯಿಲ್ ಹಾಗೂ ಟಯೋಟ ಕೊರೋಲ ಕಾರು ವಶಪಡಿಸಿಕೊಳ್ಳಲಾಗಿದೆ.
ಹೊರದೇಶದಿಂದ ಮಾದಕ ದ್ರವ್ಯ ತರಿಸಿಕೊಂಡು ನಗರದ ಹಲವೆಡೆ ಡ್ರಗ್ಸ್ ಸರಬರಾಜು ಮಾಡುತ್ತಾ ದೇಶಕ್ಕೆ ಕಂಟಕರಾಗಿದ್ದ ಇಬ್ಬರು ನೈಜರೀಯನ್‍ಗಳನ್ನು ಬಂಸುವಲ್ಲಿ ಯಶಸ್ವಿಯಾಗಿರುವ ಕೆಜಿಹಳ್ಳಿ ಉಪವಿಭಾಗದ ಎಸಿಪಿ ಕೆ.ಎಸ್.ಜಗದೀಶ್, ಗೋವಿಂದಪುರ ಠಾಣೆ ಇನ್‍ಸ್ಪೆಕ್ಟರ್ ಪ್ರಕಾಶ್.ಆರ್ ಮತ್ತು ಸಿಬ್ಬಂದಿ ವರ್ಗದವರ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಶಂಕರ್ ಗುಳೇದ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
