ಮದ್ದೂರು,ಸೆ.17- ತಾಲೂಕಿನ ಅಂಬರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಹಲ್ಲಿ ಬಿದ್ದ ಆಹಾರ ಸೇವನೆ ಮಾಡಿ 30 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಶಾಲೆಯಲ್ಲಿ ಒಟ್ಟು 53 ವಿದ್ಯಾರ್ಥಿಗಳಿದ್ದು, 48 ಮಕ್ಕಳು ಶಾಲೆಗೆ ಹಾಜರಾಗಿದ್ದರು. ಮಧ್ಯಾಹ್ನದ ಬಿಸಿಯೂಟದ ಸಾಂಬಾರಿಗೆ ಹಲ್ಲಿ ಬಿದ್ದಿದ್ದು, ಮಕ್ಕಳು ಊಟದ ತಟ್ಟೆಯಲ್ಲಿ ಹಲ್ಲಿಯ ತುಂಡುಗಳು ಕಾಣಿಸಿಕೊಂಡು ಶಿಕ್ಷಕರಿಗೆ ತಿಳಿಸಿದಾಗ ಮುಖ್ಯ ಶಿಕ್ಷಕಿ ಲಕ್ಷ್ಮೀ ಮಕ್ಕಳು ಊಟ ಮಾಡದಂತೆ ತಡೆದು ತಕ್ಷಣ ಮಕ್ಕಳಿಗೆ ಉಪ್ಪಿನ ನೀರನ್ನು ಕುಡಿಸಿ ವಾಂತಿ ಮಾಡಿಸಿದ್ದಾರೆ.
ನಂತರ ಮಕ್ಕಳಲ್ಲಿ ವಾಂತಿ ಬೇಧಿ ಕಂಡ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಫಲಪ್ರದವಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಮಕ್ಕಳು ಪಾರಾಗಿದ್ದಾರೆ. ಕೂಡಲೇ ವಿಷಯ ತಿಳಿದ ತಕ್ಷಣ ಮದ್ದೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಾಳಿರಯ್ಯ, ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಮಲವಯ್ಯ ಸ್ಥಳಕ್ಕೆ ಆಗಮಿಸಿ ಮಕ್ಕಳ ಚಿಕಿತ್ಸೆಗೆ ನೇರವಾದರು.
ಮಂಡ್ಯ ಜಿಲ್ಲಾಸ್ಪತ್ರೆಗೆ ಮದ್ದುರು ಕ್ಷೇತ್ರದಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಭೇಟಿ ನೀಡಿ ಮಕ್ಕಳ ಅರೋಗ್ಯವನ್ನು ವಿಚಾರಿಸಿದರು.
ಸಮಾಜ ಸೇವಕ ಕದಲೂರು ಉದಯ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಅರೋಗ್ಯ ವಿಚಾರಿಸಿ ಮಕ್ಕಳ ಚಿಕಿತ್ಸೆಗೆ ಧನ ಸಹಾಯ ಮಾಡಿ ಮಾನವೀಯತೆ ಮೆರೆದರು. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.