ಹೊಸ ವರ್ಷಾಚರಣೆ : ನಿಯಮ ಮೀರಿದ 31 ವಾಹನಗಳ ಜಪ್ತಿ

Social Share

ಬೆಂಗಳೂರು, ಜ.1- ಕೋವಿಡ್ ಸೋಂಕಿನ ಆತಂಕದ ನಡುವೆಯೂ ಪೊಲೀಸರು ತೆಗೆದುಕೊಂಡ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳಿಂದ ಹೊಸ ವರ್ಷದ ಸಂಭ್ರಮ ಯಾವುದೇ ಅಹಿತಕರ ಘಟನೆಗಳಿಲ್ಲದೆ, ಸರಳ-ಸುಖಾಂತ್ಯವಾಗಿ ನಡೆದಿದೆ. ಈ ನಡುವೆ ನೈಟ್ ಕಫ್ರ್ಯೂ ನಿಯಮ ಉಲ್ಲಂಘಿಸಿದ ವಾಹನಗಳ ಸವಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ನಿನ್ನೆ 31 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈವರೆಗೂ ಒಟ್ಟು 318 ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಶುಕ್ರವಾರ ರಾತ್ರಿ ನೈಟ್ ಕಫ್ರ್ಯೂ ಉಲ್ಲಂಘಿಸಿದ 26 ದ್ವಿಚಕ್ರ ವಾಹನಗಳು, ಐದು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಈವೆರೆಗೂ ಈಶಾನ್ಯ ವಿಭಾಗದಲ್ಲಿ 57,ಪಶ್ಚಿಮ ವಿಭಾಗದಲ್ಲಿ 113, ಉತ್ತರ ವಿಭಾಗದಲ್ಲಿ 12, ಕೇಂದ್ರ ವಿಭಾಗದಲ್ಲಿ 136 ಒಟ್ಟು ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ. ನೈಟ್ ಕಫ್ರ್ಯೂ ಜಾರಿಯಾದಾಗಿನಿಂದ ಒಟ್ಟು 280 ದ್ವಿಚಕ್ರ ವಾಹನ, 10 ಆಟೋಗಳು, 28 ಕಾರುಗಳನ್ನು ವಶ ಪಡಿಸಿಕೊಂಡಿರುವುದಾಗಿ ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಹೊಸ ವರ್ಷಾಚರಣೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ನಿನ್ನೆ ಸಂಜೆಯಿಂದಲೇ ಬಿಗಿ ಕ್ರಮಗಳನ್ನು ಕೈಗೊಂಡಿದ್ದರು. ಸುಮಾರು 500ಕ್ಕೂ ಹೆಚ್ಚು ಕಡೆ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು. ಪ್ರತಿಯೊಂದು ಪೊಲೀಸ್ಠಾಣೆ ವ್ಯಾಪ್ತಿಯಲ್ಲೂ ಮಹಿಳಾ ಸುರಕ್ಷತೆಗೆ ವಿಶೇಷ ತಾಣಗಳನ್ನು ನಿರ್ಮಿಸಲಾಗಿತ್ತು.
ಪ್ರತಿ ವರ್ಷ ಒಂದಿಲ್ಲ ಒಂದು ಅಹಿತಕರ ಘಟನೆಗಳು ವರಿದಿಯಾಗುತ್ತಿದ್ದವು. ಮಹಿಳೆಯರೊಂದಿಗಿನ ಅಸಭ್ಯ ವರ್ತನೆ, ಗಲಾಟೆ ಸೇರಿದಂತೆ ಹಲವು ರೀತಿಯ ಘಟನೆಗಳು ವರದಿಯಾಗುತ್ತಿದ್ದವು.
ನಿನ್ನೆಯ ಆಚರಣೆ ಶಾಂತಿಯುತವಾಗಿ ನಡೆದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲೂ ಶನಿವಾರ ಮಧ್ಯಾಹ್ನದವರೆಗೂ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.
ರಾಜ್ಯ ಸರ್ಕಾರದ ಸೂಚನೆ ಆಧರಿಸಿ ಪೊಲೀಸರು ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದರು. ಸಾರ್ವಜನಿಕರಲ್ಲಿ ವ್ಯಾಪಕ ಜನಜಾಗೃತಿ ಮೂಡಿಸಲಾಗಿತ್ತು. ಇದರಿಂದ ಬಹುತೇಕ ಮಂದಿ ನಿನ್ನೆ ಮನೆಯಿಂದ ಹೊರ ಬಂದಿರಲಿಲ್ಲ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೊರಮಂಗಲ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ವರ್ಷಾಚರಣೆಗೆ ಕಡಿವಾಣ ಹಾಕಲಾಗಿತ್ತು.
ಪಬ್, ರೆಸ್ಟೋರೆಂಟ್, ಹೊಟೇಲ್ಗಳು ಹಾಗೂ ಕ್ಲಬ್ಗಳ ಮೇಲೆ ನಿಗಾವಹಿಸಲಾಗಿತ್ತು. ಬಹುತೇಕ ಮಂದಿ ತಮ್ಮ ಮನೆಯ ಸುತ್ತಮುತ್ತಲಿನಲ್ಲೇ ಸರಳವಾಗಿ ಹೊಸ ವರ್ಷ ಆಚರಣೆ ಮಾಡಿಕೊಂಡಿದ್ದಾರೆ. ಸಣ್ಣ ಪುಟ್ಟ ಘಟನೆಗಳನ್ನು ಹೊರತು ಪಡಿಸಿ ವರ್ಷಾಚರಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ.

Articles You Might Like

Share This Article