ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ಇಲಾಖೆಯ 334 ನೌಕರರ ವಜಾ

ಬೆಂಗಳೂರು, ಏ.10- ನೋಟಿಸ್ ನೀಡಿದರೂ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ 334 ನೌಕರರನ್ನು ವಜಾಗೊಳಿಸಿ ಆದೇಶಿಸಲಾಗಿದೆ. 118 ನೌಕರರನ್ನು ವಜಾಗೊಳಿಸಲಾಗಿತ್ತು. 216 ನೌಕರರನ್ನು ಇಂದು ವಜಾಗೊಳಿಸಿ ಒಟ್ಟಾರೆ 334 ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ತರಬೇತಿಯಲ್ಲಿರುವ 60, ಪೂರ್ವ ತರಬೇತಿಯಲ್ಲಿರುವ 58 ಸೇರಿದಂತೆ ಒಟ್ಟು 334 ನೌಕರರನ್ನು ವಜಾ ಮಾಡಲಾಗಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಸೂಚನೆ ನೀಡಿದರೂ ಕೂಡ ಕ್ಯಾರೆ ಎನ್ನದೆ ಮುಷ್ಕರವನ್ನು ಮುಂದುವರಿಸಿದ್ದಾರೆ.

ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಿಗೆ ನೋಟಿಸ್ ನೀಡಲಾಗಿದೆ. ಸಂಬಳ ಕಡಿತ ಮಾಡುವ ಎಚ್ಚರಿಕೆಯನ್ನು ಕೂಡ ರವಾನಿಸಲಾಗಿದೆ. ತರಬೇತಿ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕೆಂದು ನೋಟಿಸ್ ನೀಡಿದರೂ ಕೂಡ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಸಿಬ್ಬಂದಿಯನ್ನು ಇಲಾಖೆ ವಜಾಗೊಳಿಸುತ್ತಿದ್ದು, ಈವರೆಗೆ 334 ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.