ಅಹಮದಾಬಾದ್,ಅ. 8 (ಪಿಟಿಐ) – ಮಾದಕ ದ್ರವ್ಯ ಸಾಗಿಸುತ್ತಿದ್ದ ಪಾಕ್ ಮೂಲದ ದೋಣಿಯನ್ನು ವಶಕ್ಕೆ ಪಡೆದಿರುವ ಕರಾವಳಿ ಭದ್ರತಾ ಪಡೆ ಹಾಗೂ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು 360 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಪಾಕ್ ಮೂಲಕ ಭಾರತಕ್ಕೆ ಮಾದಕ ದ್ರವ್ಯ ಸರಬರಾಜು ಮಾಡಲಾಗುತ್ತಿದೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿದ ಕರಾವಳಿ ಭದ್ರತಾ ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಅರಬ್ಬಿ ಸಮುದ್ರ ಮಾರ್ಗದ ಮೇಲೆ ಹದ್ದಿನಕಣ್ಣಿಟ್ಟು ಕಾಯುತ್ತಿದ್ದರು.
ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಪಾಕ್ ಮೂಲದ ದೋಣಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ದೋಣಿಯಲ್ಲಿ 50 ಕೆ.ಜಿ ತೂಕದ ಹೆರಾಯಿನ್ ದೊರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 50 ಕೆ.ಜಿ ಹೆರಾಯಿನ್ ಮೌಲ್ಯ 360 ರೂ.ಗಳಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾದಕ ದ್ರವ್ಯ ಸಾಗಿಸುತ್ತಿದ್ದ ಪಾಕ್ ಮೂಲದ ಅಲ್ ಸಕರ್ ಬೋಟ್ ಹಾಗೂ ಮಾದಕ ದ್ರವ್ಯ ಸಾಗಿಸುತ್ತಿದ್ದ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಲಾಗಿದೆ.