ಸದ್ಯದಲ್ಲೇ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆ ಅಭ್ಯರ್ಥಿಗಳ ಕೈಸೇರಲಿದೆ ನೇಮಕಾತಿ ಆದೇಶ

Social Share

ಬೆಂಗಳೂರು,ಫೆ.21-2011ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಮೂಲಕ ನೇಮಕಗೊಂಡಿದ್ದ ಗೆಜೆಟೆಡ್ ಪ್ರೊಬೆಷನರಿ ಆಯ್ಕೆ ಮತ್ತು ನೇಮಕಾತಿಯನ್ನು ಸಿಂಧುಗೊಳಿಸುವ ಮಹತ್ವದ ವಿಧೇಯಕವನ್ನು ವಿಧಾನಸಭೆಯಲ್ಲಿಂದು ಅಂಗೀಕರಿಸಲಾಯಿತು. ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಕೆಪಿಎಸ್ಸಿ ಮೂಲಕ ನೇಮಕಗೊಂಡಿದ್ದ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಸದ್ಯದಲ್ಲೇ ಕೈ ಸೇರಲಿದೆ.
ಸಿಎಂ ಬೊಮ್ಮಾಯಿ ಪರವಾಗಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ವಿಧೇಯಕವನ್ನು ಮಂಡಿಸಿದರು. ನಂತರ ಮಾತನಾಡಿದ ಅವರು, 2011ರಲ್ಲಿ ಕೆಪಿಎಸ್ಸಿ ಮೂಲಕ ಗ್ರೂಪ್ ಎ, ಡಿ ಸೇರಿದಂತೆ ಒಟ್ಟು 362 ಹುದ್ದೆಗಳನ್ನು ನೇಮಕ ಮಾಡಲಾಗಿತ್ತು. ಆದರೆ ನೇಮಕಾತಿ ಸಂದರ್ಭದಲ್ಲಿ ಕೆಪಿಎಸ್ಸಿ ಸದಸ್ಯರು ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿ ಸಾಕಷ್ಟು ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಅಂದಿನ ಸರ್ಕಾರ ನೇಮಕಾತಿ ಆದೇಶವನ್ನು ಸಂಪೂರ್ಣವಾಗಿ ರದ್ದುಪಡಿಸಿ ಸಿಐಡಿ ತನಿಖೆಗೆ ಆದೇಶ ಮಾಡಿತ್ತು. ಸಿಐಡಿಯ ಮಧ್ಯಂತರ ವರದಿಯಲ್ಲಿ ಮೇಲ್ನೋಟಕ್ಕೆ ನೇಮಕಾತಿ ವೇಳೆ ಸಾಕಷ್ಟು ಅಕ್ರಮ ವೆಸಗಿರುವುದು ಕಂಡುಬಂದಿದೆ. ಹೀಗಾಗಿ ನೇಮಕಾತಿ ಪ್ರಕ್ರಿಯೆಯನ್ನು ನಿಷ್ಕ್ರಿಯಗೊಳಿಸಬೇಕೆಂದು ಸೂಚಿಸಿತ್ತು.
ಕೊನೆಗೆ ಆಯ್ಕೆಗೊಂಡಿದ್ದ ಅಭ್ಯರ್ಥಿಗಳು ಕೆಎಟಿ ಮೂಲಕ ಮೊರೆ ಹೋಗಿದ್ದರು. ಅಂತಿಮವಾಗಿ ಹೈಕೋರ್ಟ್ ಮಧ್ಯಪ್ರವೇಶಿಸಿ ಸರ್ಕಾರದ ನಿಲುವೇನು ಎಂದು ಪ್ರಶ್ನೆ ಮಾಡಿತ್ತು. ಆಯ್ಕೆಯಾದ ಅಭ್ಯರ್ಥಿಗಳ ಹಿತ ಕಾಪಾಡುವುದಾಗಿ ತಮ್ಮ ನಿಲುವು ತಿಳಿಸಿದ್ದೆವು. ಇದರ ನಡುವೆ ಅಕ್ರಮದಲ್ಲಿ ಶಾಮೀಲಾಗಿದ್ದ ಕೆಪಿಎಸ್ಸಿ ಸದಸ್ಯರನ್ನು ವಿಚಾರಣೆಗೆ ಒಳಪಡಿಸುವ ಅಕಾರವನ್ನು ಸರ್ಕಾರ ನೀಡಲಿಲ್ಲ. ಈ ಎಲ್ಲ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಅಂತಿಮವಾಗಿ ಅಭ್ಯರ್ಥಿಗಳಿಗೆ ನೇಮಕಾತಿ ಸಿಂಧುಗೊಳಿಸಲು ಸರ್ಕಾರ ತೀರ್ಮಾನಿಸಿತು.
ಶಾಸನಸಭೆಗಿರುವ ಅಕಾರವನ್ನು ಸಂವಿಧಾನದ ಚೌಕಟ್ಟಿನಲ್ಲಿ ಬಳಸಿ ಈ ವಿಧೇಯಕವನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 2022ನೇ ಸಾಲಿನ ಕರ್ನಾಟಕ ಸ್ಟ್ಯಾಂಪ್(ತಿದ್ದುಪಡಿ) ವಿಧೇಯಕವನ್ನು ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಪರವಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು 2022ನೇ ಸಾಲಿನ ಕ್ರಿಮಿನಲ್ ಕಾನೂನು ತಿದ್ದುಪಡಿ ಆಧ್ಯದೇಶ 1944( ತಿದ್ದುಪಡಿ)ವನ್ನು ಮಂಡಿಸಿದರು. ನಂತರ ಸಭಾಧ್ಯಕ್ಷರು ಇದನ್ನು ಅಂಗೀಕರಿಸಿದರು.

Articles You Might Like

Share This Article