ಬಿಡಿಎ ನಿರ್ಮಿಸಿದ ಬಡಾವಣೆಯಲ್ಲಿ 38 ಎಕರೆ ಅನಧಿಕೃತ ಜಾಗ ಮರು ವಶ

Social Share

ಬೆಂಗಳೂರು, ಫೆ.17- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ 64 ಬಡಾವಣೆಗಳ ಪೈಕಿ ನಾಡಪ್ರಭು ಕೆಂಪೇಗೌಡ ಹಾಗೂ ಎಚ್ ಎಸ್ ಆರ್ ಲೇಔಟ್ ನ ಎರಡನೇ ಹಂತ ಹೊರತು ಪಡಿಸಿ ಉಳಿದ 62 ಬಡಾವಣೆಗಳಲ್ಲಿ ಭೂ ಲೆಕ್ಕ ಪರಿಶೋಧನೆ ನಡೆಸಲಾಗಿದ್ದು, 38 ಎಕರೆ ಜಾಗ ಮತ್ತು ವಿವಿಧ ಅಳತೆಯ ಒಂಬತ್ತು ನಿವೇಶನಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಜೆಡಿಎಸ್ ನ ಸದಸ್ಯ ಕೆ.ಎ.ತಿಪ್ಪೆಸ್ವಾಮಿ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಇಐ ಟೆಕ್ನಾಲಜಿಸ್ ಪ್ರವೈಟ್ ಲಿಮಿಡೆಟ್ ಸಂಸ್ಥೆಯಿಂದ ಸಂಸ್ಥೆಯಿಂದ ಬಿಡಿಎ ನಿರ್ಮಿಸಿದ 64 ಬಡಾವಣೆಗಳಲ್ಲಿ ಭೂ ಲೆಕ್ಕ ಪರಿಶೋಧನೆ ಆದೇಶಿಸಲಾಗಿದೆ. ಅವುಗಳಲ್ಲಿ 62 ಬಡಾವಣೆಗಳಲ್ಲಿ ನಿರ್ಮಿಸಲಾದ ನಿವೇಶನ, ಉದ್ಯಾನವನ, ರಸ್ತೆ, ನಾಗರೀಕ ಸೌಲಭ್ಯ (ಸಿಎ) ನಿವೇಶನ ವಿಸ್ತಾರಗಳನ್ನು ನಮೂದಿಸಿ ಭೂ ಪ್ರದೇಶ ಉಪಯೋಗಿಸಿಕೊಂಡಿರುವ ಬಗ್ಗೆ ಅಂತಿಮ ವರದಿ ನೀಡಿದೆ.
ಐತೀರ್ಪು ಹೊರಡಿಸಿರುವ ಪ್ರದೇಶದಲ್ಲಿ ಖಾಲಿ ಜಾಗ, ಅನಧಿಕೃತ ಕಟ್ಟಡ ಪ್ರದೇಶಗಳು ಮತ್ತು ಐತೀರ್ಪು ಹೊರಡಿಸದೆ ಇದ್ದ ಪ್ರದೇಶದಲ್ಲಿ ಭೂ ಪ್ರದೇಶದ ಲೆಕ್ಕಾಚಾರ ಮಾಡಿ ಒಟ್ಟಾರೆ ಖಾಲಿ ಹಾಗೂ ಅನಕೃತ ಕಟ್ಟಡ ಪ್ರದೇಶಗಳನ್ನು ಗುರುತಿಸಲಾಗಿದೆ. ಸದರಿ ವರದಿ ಅನ್ವಯ ಈವರೆಗೂ ಒಟ್ಟು 38 ಎಕರೆ 2 ಗುಂಟೆ ಜಮೀನು ಹಾಗೂ 9 ನಿವೇಶನಗಳನ್ನು ಪ್ರಾಧಿಕಾರ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಉತ್ತರದಲ್ಲಿ ಲಗತ್ತಿಸಿರುವ ವರದಿ ಸಂಕ್ಷೀಪ್ತ ಮಾಹಿತಿ ಪ್ರಕಾರ 64 ಬಡಾವಣೆಗಳು 38,380 ಎಕರೆ ಪ್ರದೇಶವನ್ನು ಒಳಗೊಂಡಿದೆ. 62 ಬಡಾವಣೆಗಳಲ್ಲಿ 34,219 ಎಕರೆ 36 ಗುಂಟೆಗೆ ಅಂತಿಮ ಅಸೂಚನೆಯಾಗಿದೆ. ಇದರಲ್ಲಿ 11,884 ಎಕರೆ 18 ಗುಂಟೆಯಲ್ಲಿ ಶೇ.35ರಷ್ಟು ಇಂಜಿನಿಯರಿಂಗ್ ಕೆಲಸಗಳಾಗಿವೆ 14,686 ಎಕರೆಯಲ್ಲಿ ಶೇ.43ರಷ್ಟು ನಿವೇಶನಾಭಿವೃದ್ಧಿ ಕೆಲಸಗಳಾಗಿವೆ. 2,036 ಎಕರೆಯನ್ನು ಡಿ-ನೋಟಿಫಿಕೇಷನ್ ಮಾಡಲಾಗಿದ್ದು, ಅಲ್ಲಿ ಶೇ.5.95ರಷ್ಟು ಕೆಲಸವಾಗಿತ್ತು ಎಂದು ವಿವರಣೆ ನೀಡಲಾಗಿದೆ.

Articles You Might Like

Share This Article