ಬೆಂಗಳೂರಲ್ಲಿ ಮಾರಲೆತ್ನಿಸುತ್ತಿದ್ದ 399.6 ಕೆಜಿ ರಕ್ತ ಚಂದನ ವಶ

Social Share

ಬೆಂಗಳೂರು, ಅ.29- ತಮಿಳುನಾಡಿನಿಂದ ರಕ್ತಚಂದನ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿ 399.6 ಕೆಜಿ ತೂಕದ ರಕ್ತ ಚಂದನ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಅ.16ರಂದು ಸಂಜೆ ಸುಮಾರು 5.15ರಲ್ಲಿ ವಾಟಾಳ್ ನಾಗರಾಜ್ ರಸ್ತೆ ರೇಷ್ಮೆ ಭವನದ ಬಳಿಯ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬ ಬ್ಯಾಗ್ ಹಿಡಿದುಕೊಂಡು ಅನುಮಾನಸ್ಪದವಾಗಿ ನಿಂತಿದ್ದನು. ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪಿಎಸ್‍ಐ ಆಂಜನೇಯ ಮತ್ತು ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ 11.6 ಕೆಜಿ ರಕ್ತಚಂದನ ಮರದ ತುಂಡುಗಳು ಪತ್ತೆಯಾಗಿದೆ.

ಆರೋಪಿಯನ್ನು ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆಗೆ ಒಳಪಡಿಸಿ ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈ ಪ್ರಕರಣದಲ್ಲಿ ಇನ್ನು ಹಲವರು ಭಾಗಿಯಾಗಿರುವುದಾಗಿ ತಿಳಿಸಿದ್ದು, ಆತನ ಮಾಹಿತಿ ಮೇರೆಗೆ ತನಿಖೆ ಮುಂದುವರೆಸಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಕೃಷ್ಣಗಿರಿ ನಿವಾಸಿ ಸಯ್ಯದ್ ನೂರುದ್ದೀನ್ ಹಾಗೂ ಬೊಮ್ಮನಹಳ್ಳಿ ನಿವಾಸಿ ಇಮ್ತಿಯಾಜ್ ಪಾಷ ಬಂಧಿತ ಆರೋಪಿಗಳು. ಆರೋಪಿಗಳು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊರವಲಯದ ಶೆಡ್ಡಿನಲ್ಲಿ ಶೇಖರಿಸಿಟ್ಟಿದ್ದ 399.6 ಕೆಜಿ ತೂಕದ ರಕ್ತಚಂದನ ಮರದ ತುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಈ ಪ್ರಕರಣದಲ್ಲಿ ಆಂಧ್ರ ಪ್ರದೇಶ ಮೂಲದ ಆರೋಪಿಯೊಬ್ಬ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಇನ್ಸ್‍ಪೆಕ್ಟರ್ ಬಾಲಕೃಷ್ಣ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article