ಬೆಂಗಳೂರು,ಆ.6- ಮೂರು ಪ್ರತ್ಯೇಕ ಪ್ರಕರಣಗಳನ್ನು ಬೇಧಿಸಿದ ಈಶಾನ್ಯ ವಿಭಾಗದ ಪೊಲೀಸರು ಐದು ಮಂದಿಯನ್ನು ಬಂಧಿಸಿ ದ್ವಿಚಕ್ರ ವಾಹನ ಹಾಗೂ 5 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಸಂಪಿಗೆಹಳ್ಳಿ ಜೂ.5ರಂದು ಸಂಜೆ 4.30ರ ಸುಮಾರಿನಲ್ಲಿ ಜೆಸ್ವಿನ್ ಎಂಬುವರು ಸ್ನೇಹಿತನನ್ನು ಸ್ಕೂಟರ್‍ನಲ್ಲಿ ಕರೆದುಕೊಂಡು ಕಣ್ಣೂರಿನಿಂದ ಯಲಹಂಕಗೆ ಹೋಗುತ್ತಿದ್ದಾಗ ಬೆಳ್ಳಹಳ್ಳಿ ಕ್ರಾಸ್ ಹತ್ತಿರದಲ್ಲಿರುವ ಅಂಡರ್‍ಪಾಸ್ ಹತ್ತಿರ ಯಮಹಾ ಬೈಕ್‍ನಲ್ಲಿ ಬಂದ ಇಬ್ಬರು ಜೆಸ್ವಿನ್ ಅವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಸಂಪಿಗೆಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡು ಯಲಹಂಕದ ಶ್ರೀನಿವಾಸನಗರದ ಮೋಹನ್ ರಾಜ್(20) ಮತ್ತು ಶ್ರೀರಾಂಪುರದ ದಿನೇಶ್(20)ನನ್ನು ಬಂಧಿಸುವ ಮೂಲಕ ಎರಡು ಪ್ರಕರಣಗಳಿಗೆ ಸೇರಿದ 2 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ. ಸಂಪಿಗೆಹಳ್ಳಿ ಠಾಣೆ ಸಬ್‍ಇನ್‍ಸ್ಪೆಕ್ಟರ್ ಶಿವಕುಮಾರ್ ಬದ್ನೂರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.
ಯಲಹಂಕ ಜು.23ರಂದು ಸಂಜೆ 7 ಗಂಟೆ ಸುಮಾರಿನಲ್ಲಿ ಬಿಷ್ಟು ಲೋಹನ್ ಎಂಬುವರು ಬಾಗಲೂರು ಕ್ರಾಸ್ ಬಳಿ ತರಕಾರಿ ತೆಗೆದುಕೊಂಡು ಬರಲು ಸ್ನೇಹಿತ ಮಹವೀರ್ ಘೋರಾ ಎಂಬುವರೊಂದಿಗೆ ಹೋಗಿ ಲೇಬರ್ ಕಾಲೋನಿಗೆ ಮರಳಿ ನಡೆದು ಹೋಗುತ್ತಿದ್ದರು.
ಆ ವೇಳೆ ದರೋಡೆಕೋರ ಇವರನ್ನು ಅಡ್ಡಹಾಕಿ ಪೈಸಾ ನಿಕಾಲೋ ಎಂದು ಹಿಂದಿಯಲ್ಲಿ ಕೇಳಿದ್ದಾನೆ. ತಮ್ಮ ಬಳಿ ಇಲ್ಲ ಎಂದು ಹೇಳಿದಾಗ ಅವರ ಕೈಲಿದ್ದ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಅವರು ಯಲಹಂಕ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಕೈಗೊಂಡ ವಿಶೇಷ ತಂಡ ಆರೋಪಿಗಳಾದ ಸಾಯಿಲ್ ಬೇಗ್(20) ಶ್ರೀನಿವಾಸ್ ಅಲಿಯಾಸ್ ಸೀನಿ(20)ಯನ್ನು ಬಂಧಿಸಿ ಸುಲಿಗೆ ಮಾಡಿದ್ದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಯಲಹಂಕ ಠಾಣೆಯ ಪಿಎಸ್‍ಐ ಹರೀಶ್, ಮಧುಸೂದನ್ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.
ಕೊತ್ತನೂರು ವಿಳಾಸ ಕೇಳುವ ನೆಪದಲ್ಲಿ ಸುಲಿಗೆ ಮಾಡಿದ್ದ ಸುಲಿಗೆಕೋರರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿ 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಸುರೇಶ್(24) ಎಂಬುವರು ಬ್ರಿಗೇಡ್ ಹೈಪರ್ ಮಾರ್ಟ್‍ನಲ್ಲಿ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದು, ಜು.22ರಂದು ರಾತ್ರಿ 10.30ರ ಸುಮಾರಿನಲ್ಲಿ ವಿಸ್ಡಮ್ ಟ್ರೀ ಅಪಾರ್ಟ್‍ಮೆಂಟ್‍ಗೆ ಫುಡ್ ಡೆಲಿವರಿ ನೀಡಲು ವಾಜೀದ್ ಲೇಔಟ್ ದಾರಿಯಲ್ಲಿ ಹೋಗುತ್ತಿದ್ದರು.
ಆ ವೇಳೆ ಇಬ್ಬರು ಸುಲಿಗೆಕೋರರು ಏಕಾಏಕಿ ಈತನನ್ನು ಅಡ್ಡಗಟ್ಟಿ ಈ ಲೋಕೆಷನ್ ನಿಮಗೆ ಗೊತ್ತ ಎಂದು ಕೇಳಿದ್ದಾರೆ. ನಮಗೆ ಗೊತ್ತಿಲ್ಲ ಎಂದಾಗ ಹೈಲೈಟನಿಂದ ಕೆನ್ನೆಗೆ ಹೊಡೆದು, ಕಲ್ಲಿನಿಂದ ಹೊಡೆಯಲು ಬಂದು, 2 ಮೊಬೈಲ್‍ಗಳು ಹಾಗು ಬೆಳ್ಳಿ
ಚೈನ್ ಕಸಿದುಕೊಂಡು ಹೋಗಿದ್ದನು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕೆಜಿಹಳ್ಳಿಯ ಆರೋಪಿ ಮುಬಾರಕ್(23)ನನ್ನು ಬಂಧಿಸಿ 2 ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೊತ್ತನೂರು ಠಾಣೆ ಇನ್‍ಸ್ಪೆಕ್ಟರ್ ಚನ್ನೇಶ್, ಪಿಎಸ್‍ಐ ಮಂಜುನಾಥ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.