ತುಮಕೂರು : 2 ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಬೈಕ್ ಸವಾರರ ಸಾವು

Accidentn--01

ತುಮಕೂರು/ ಕೊರಟಗೆರೆ, ಸೆ.2- ಇಂದು ಬೆಳಂಬೆಳಗ್ಗೆ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಉಪನ್ಯಾಸಕ ಸೇರಿ ನಾಲ್ವರು ಬೈಕ್ ಸವಾರರು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕೊರಟಗೆರೆ ಬೈಪಾಸ್ ರಸ್ತೆಯ ರಿಂಗ್ ರೋಡ್‍ನಲ್ಲಿ ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಕೊರಟಗೆರೆಯ ಬಳವನಹಳ್ಳಿಯ ರಾಯವಾರ ನಿವಾಸಿ ವೈದ್ಯಕೀಯ ವಿದ್ಯಾರ್ಥಿ ಆಸೀಫ್ , ದೊಡ್ಡಪಾಲನ ಗ್ರಾಮದ ನಿವಾಸಿ ನಳಿನ್ ಕುಮಾರ್ (34) ಹಾಗೂ ಚಿಂತಾಮಣಿಯ ನಂದಿಗನಹಳ್ಳಿ ಗ್ರಾಮದ ನಿವಾಸಿ ಉಪನ್ಯಾಸಕ ಸೋಮಶೇಖರ್ (28) ಮೃತಪಟ್ಟವರು.

ಆಸಿಫ್ ಅವರು ತನ್ನ ಸ್ನೇಹಿತ ನಳಿನ್ ಕುಮಾರ ಅವರನ್ನು ಕರೆದುಕೊಂಡು ಪಲ್ಸರ್ ಬೈಕ್‍ನಲ್ಲಿ ತುಮಕೂರು ಕಡೆಯಿಂದ ಕೊರಟಗೆರೆ ಕಡೆಗೆ ಬರುತ್ತಿದ್ದಾಗ ಸೋಮಶೇಖರ್ ಅವರು ಮಧುಗಿರಿಯಿಂದ ಮತ್ತೊಂದು ಬೈಕ್‍ನಲ್ಲಿಬರುತ್ತಿದ್ದಾಗ ರಿಂಗ್ ರಸ್ತೆಯ ತಿರುವೊಂದರಲ್ಲಿ ಮುಖಾಮುಖಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.

ಎರಡೂ ಬೈಕ್‍ಗಳು ವೇಗವಾಗಿ ಬರುತ್ತಿತ್ತು. ತಿರುವಿನಲ್ಲಿ ಸವಾರರ ನಿಯಂತ್ರಣಕ್ಕೆ ಬಾರದೆ ಪರಸ್ಪರ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಆಸೀಫ್ ಮತ್ತು ನಳಿನ್ ಕುಮಾರ್ ಸ್ಥಳದಲ್ಲೇ ಮೃತಪಟ್ಟರೆ, ಸೋಮಶೇಖರ್ ಅವರು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.  ಸೋಮಶೇಖರ್ ಅವರು ಬೆಂಗಳೂರಿನ ವೈಟ್‍ಫೀಲ್ಡ್‍ನ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಮಧುಗಿರಿಯ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ತಮ್ಮವನ್ನು ಕಳೆದುಕೊಂಡ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ವೃತ್ತ ನಿರೀಕ್ಷಕ ಮುನಿರಾಜು, ಎಸ್.ಐ. ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

# ಪರಮೇಶ್ವರ್ ವಿರುದ್ಧ ಆಕ್ರೋಶ
ಕೊರಟಗೆರೆಯ ರಿಂಗ್ ರಸ್ತೆಯಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿದ್ದು, ಇಲ್ಲಿ ಯಾವುದೇ ಮುನ್ಸೂಚನಾ ಫಲಕ ಹಾಕಿಲ್ಲ. ವೇಗದ ಮಿತಿಯನ್ನು ಸೂಚಿಸುವ ಫಲಕವನ್ನು ಹಾಕಿಲ್ಲ. ಇದಕ್ಕೆ ಜಿಲ್ಲಾಡಳಿತದ ಬೇಜವಾಬ್ದಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗೃಹ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರವಾದ ಕೊರಟಗೆರೆಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದರೂ ಅವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕೂಡಲೇ ಅವರು ಅಧಿಕಾರಿಗಳ ಸಭೆ ಕರೆದು ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

# ಬೈಕ್‍ಗೆ ಲಾರಿ ಡಿಕ್ಕಿ- ಸವಾರ ಮೃತ್ಯು

ದ್ವಿ ಚಕ್ರ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ಸಿದ್ದಾರ್ಥ ನಗರದ ಮಲ್ಲಸಂದ್ರದಲ್ಲಿ ಇಂದ ಮುಂಜಾನೆ ನಡೆದಿದೆ. ಕೊಟ್ನಹಳ್ಳಿಯ ನಿವಾಸಿ ಪರಮೇಶ್ವ (35) ಮೃತಪಟ್ಟವರು. ಆಯಿಲï ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಪರಮೇಶ್ವರ ಇಂದು ಮುಂಜಾನೆ 6.30ರ ಸುಮಾರಿಗೆ ಬೈಕ್‍ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಪರಮೇಶ್ವರ್ ಅವರು ಮಲ್ಲಸಂದ್ರದ ಬಳಿಯ ಸ್ವಾಲಂಟ್ ರೈಸ್ ಮಿಲ್ ಸಮೀಪ ಮುಂದೆ ಹೋಗುತ್ತಿದ್ದ ವಾಹನವೊಂದನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದ್ದಾರೆ. ಆಗ ಎದುರಿನಿಂದ ವೇಗವಾಗಿ ಬಂದ ಲಾರಿ ಇವರ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಅವರು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ನಜ್ಜುಗುಜ್ಜಾಗಿ ರಸ್ತೆಯಲ್ಲಿ ಬಿದ್ದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಪಘಾತದಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಕ್ಷಣ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.   ಸ್ಥಳಕ್ಕೆ ಗ್ರಾಮಾಂತರ ವೃತ್ತ ನಿರೀಕ್ಷರಾದ ಮಧುಸೂಧನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Sri Raghav

Admin