ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್ : ಎಸ್‍ಐ ಹುತಾತ್ಮ, ನಾಲ್ವರು ನಕ್ಸಲರು ಖತಂ..!

ರಾಯ್‍ಪುರ, ಮೇ 9- ಕೊರೊನಾ ವೈರಸ್ ಸಂಕಷ್ಟದಲ್ಲೂ ಅತ್ತ ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದರೆ, ಇತ್ತ ಛತ್ತೀಸ್‍ಗಢದಲ್ಲಿಯೂ ನಕ್ಸಲರ ಹಾವಳಿ ಮುಂದುವರಿದಿದೆ.ಛತ್ತೀಸ್‍ಗಢದ ರಾಜನಂದ್‍ಗಾಂವ್ ಜಿಲ್ಲೆಯ ಮನ್ಪುರದ ಪರ್ದೊನಿ ಗ್ರಾಮದ ಬಳಿ ಮಾವೋವಾದಿಗಳ ಜತೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಸಬ್ ಇನ್ಸ್‍ಪೆಕ್ಟರ್ ಒಬ್ಬರು ಹುತಾತ್ಮರಾಗಿದ್ದು, ನಾಲ್ವರು ನಕ್ಸಲರು ಹತರಾಗಿದ್ದಾರೆ.

ಮನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ಮದನ್ವಾಡ ಪೆÇಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಎಸ್. ಕೆ.ಶರ್ಮ ಹುತಾತ್ಮರಾಗಿದ್ದಾರೆ ಎಂದು ರಾಜನಂದ್‍ಗಾಂವ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಶುಕ್ಲ ತಿಳಿಸಿದ್ದಾರೆ.

ಹತರಾದ ಮಾವೋವಾದಿಗಳಿಂದ ಎಕೆ-47, ಎಸ್‍ಎಲ್‍ಆರ್ ಮತ್ತು ಬೋರ್ ರೈಫಲ್‍ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತರಾದ ನಕ್ಸಲೀಯರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ.

ಛತ್ತೀಸ್‍ಗಢ ರಾಜಧಾನಿ ರಾಯ್‍ಪುರ್‍ನಿಂದ ಪಶ್ಚಿಮಕ್ಕೆ 170 ಕಿಮೀ ದೂರದಲ್ಲಿರುವ ರಾಜನಂದ್‍ಗಾಂವ್‍ನ ಮನ್ಪುರದ ಪರ್ದೊನಿ ಗ್ರಾಮದ ಬಳಿ ನಕ್ಸಲರು ಅವಿತಿಟ್ಟುಕೊಂಡು ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತು.

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ರಾಜನಂದ್‍ಗಾಂವ್ ಮಾವೋವಾದಿಗಳ ಹಾಟ್‍ಸ್ಪಾಟ್ ಎಂದೇ ಗುರುತಿಸಲ್ಪಟ್ಟಿದೆ. ಎಸ್‍ಐ ಶರ್ಮ ನೇತೃತ್ವದ ತಂಡವು ರಾತ್ರಿ ಆ ಪ್ರದೇಶವನ್ನು ಸುತ್ತುವರಿದು ಬಂಡುಕೋರರಿಗಾಗಿ ಶೋಧ ನಡೆಸಿತು.

ಈ ಸಂದರ್ಭದಲ್ಲಿ ಆ ಪ್ರದೇಶದಿಂದ ಪರಾರಿಯಾಗಲು ನಕ್ಸಲರು ಯತ್ನಿಸಿದಾಗ ಗುಂಡಿನ ಚಕಮಕಿ ನಡೆಯಿತು. ಮಾವೋವಾದಿಗಳು ನಡೆಸಿದ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಎಸ್.ಕೆ. ಶರ್ಮ ಹುತಾತ್ಮರಾದರು.

ಮುಂದುವರಿದ ಎನ್‍ಕೌಂಟರ್‍ನಲ್ಲಿ ನಾಲ್ವರು ನಕ್ಸಲರು ಹತರಾದರು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಹತರಾದ ಮಾವೋವಾದಿಗಳಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಗುಂಡಿನ ಚಕಮಕಿ ವೇಳೆ ಪರಾರಿಯಾಗಿರಬಹುದಾದ ಇತರ ನಕ್ಸಲರಿಗಾಗಿ ಶೋಧ ಮುಂದುವರಿದಿದೆ.

Sri Raghav

Admin