ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಶಂಕಿತ ಖಲಿಸ್ತಾನಿ ಉಗ್ರರು..! ಆತಂಕದಲ್ಲಿ ಭಾರತ..!
ನವದೆಹಲಿ,ಮೇ 8- ಪಾಕಿಸ್ತಾನದಿಂದ ಭಾರತದ ಪಂಜಾಬ್ ಸೇರಿದಂತೆ ದೇಶದ ಇತರೆ ಭಾಗಗಳಿಗೆ ಅಪಾಯಕಾರಿ ಸ್ಪೋಟಕ(ಆರ್ಡಿಎಕ್ಸ್) ಗಳು, ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂದು ಶಂಕಿತ ಖಲಿಸ್ತಾನಿ ಉಗ್ರರು ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಹರಿಯಾಣದ ಕರ್ನಲ್ನಲ್ಲಿ ನಾಲ್ವರು ಶಂಕಿತ ಖಲಿಸ್ತಾನಿ ಉಗ್ರರನ್ನು ಪೊಲೀಸರು ಬಂಧಿಸಿದ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಅಪಾಯಕಾರಿ ಸ್ಪೋಟಕಗಳು, ಶಸ್ತ್ರಾಸ್ತ್ರಗಳು ಮತ್ತು ಗ್ರೇನಡ್ಗಳನ್ನು ಪಾಕಿಸ್ತಾನದಿಂದ ಡ್ರೋನ್ಗಳ ಮೂಲಕ ಭಾರತದ ಮೂರು ಕಡೆ ಪಡೆದುಕೊಳ್ಳಲಾಗಿದೆ ಎಂದು ವಿಚಾರಣೆ ವೇಳೆ ಶಂಕಿತರು ಬಾಯ್ಬಿಟ್ಟಿದ್ದಾರೆ.
ಮೊದಲು ಅಮೃತಸರ-ತಾರ್ನ್ ತರಣ್ ಹೆದ್ದಾರಿ ಬಳಿ ಸುಧಾರಿತ ಸ್ಪೋಟಕ ಸಾಧನ ಮತ್ತು ಶಸ್ತ್ರಾಸ್ತ್ರಗಳನ್ನು ಇರಿಸಿದ್ದರು. ಎರಡನೇ ರವಾನೆಯಲ್ಲಿ ನಾಂದೇಡ್-ಹೈದರಾಬಾದ್ ಹೆದ್ದಾರಿಯಲ್ಲಿ ಐಇಡಿ ಮತ್ತು ಗ್ರೆನೇಡ್ಗಳನ್ನು ಇರಿಸಿದ್ದರು. 3ನೇ ರವಾನೆಯಲ್ಲಿ ಭಯೋತ್ಪಾದಕರು ತೆಲಂಗಾಣದ ಆದಿಲಾಬಾದ್ಗೆ ತೆರಳುತ್ತಿದ್ದಾಗ ಕರ್ನಾಲ್ನಲ್ಲಿ ಸ್ಪೋಟಕಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನದ ಬಬ್ಬರ್ ಖಾಲ್ಸಾ ಅಂತಾರಾಷ್ಟ್ರೀಯ ಭಯೋತ್ಪಾದಕ ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡಾ ಎಂಬಾತ ಡ್ರೋ ಣ್ ಬಳಸಿಕೊಂಡು ಪಾಕಿಸ್ತಾನದಿಂದ ಐಇಡಿ ಮತ್ತು ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಕಳುಹಿಸುತ್ತಿರುವ ಬಗ್ಗೆ ಅಮನ್ದೀಪ್ ಮತ್ತು ಗುರ್ಪ್ರೀತ್ ಬಹಿರಂಗಪಡಿಸಿದ್ದಾರೆ.
ಅದೇ ರೀತಿ ಗಡಿಯಾಚೆಯಿಂದಲೂ ಡ್ರಗ್ಸ್ ಭಾರತಕ್ಕೆ ಬರುತ್ತಿತ್ತು. ಡ್ರಗ್ಗಳನ್ನು ಪಂಜಾಬ್ನ ಡೀಲರ್ಗೆ ಮಾರಾಟ ಮಾಡುವ ಮೂಲಕ ಹಣ ಪಡೆಯಲಾಗುತ್ತಿತ್ತು ಮತ್ತು ಸ್ಪೋಟಕಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ರಿಂಡಾ ನಿಯೋಜಿಸಿದ ಸ್ಥಳಗಳಿಗೆ ತಲುಪಿಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ.