ಬೆಂಗಳೂರು, ಜ.6- ನಗರದ ಉತ್ತರ ವಿಭಾಗದಲ್ಲಿ ಇಂದು ಮುಂಜಾನೆ ನಾಲ್ವರು ಮಹಿಳೆಯರ ಸರಗಳ ಅಪಹರಣಗಳಾಗಿವೆ. ಇಂದು ಬೆಳಗಿನ ಜಾವ 5.30ರಿಂದ ಸರಗಳ್ಳರು ಬೈಕ್ನಲ್ಲಿ ಸುತ್ತಾಡುತ್ತಾ 9 ಗಂಟೆಯ ನಡುವೆ ನಾಲ್ವರು ಮಹಿಳೆಯರ ಸರಗಳನ್ನು ಎಗರಿಸಿ ಪರಾರಿಯಾಗಿದ್ದಾರೆ.
ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರ ಸರ ಅಪಹರಣವಾಗಿದ್ದರೆ ಯಶವಂತಪುರ ಹಾಗೂ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಇಬ್ಬರು ಮಹಿಳೆಯರ ಸರ ಅಪಹರಣ ನಡೆದಿದೆ.
ಬಾಗಲಗುಂಟೆ: ಇಂದು ಬೆಳಗಿನ ಜಾವ 5.30ರ ಸುಮಾರಿನಲ್ಲಿ ಸರ್ವಮಂಗಳ ಎಂಬುವರು ಎಂಇಐ ಲೇಔಟ್ನಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದ ಸರಗಳ್ಳರು ಅವರ ಕೊರಳಿಗೆ ಕೈ ಹಾಕಿ 60 ಗ್ರಾಂ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಸಹಾಯಕ್ಕಾಗಿ ಸರ್ವಮಂಗಲ ಅವರು ಕೂಗಿಕೊಂಡರಾದರೂ ಅಷ್ಟೊತ್ತಿಗಾಗಲೇ ಸರಗಳ್ಳರು ಮಾಯವಾಗಿದ್ದರು.
ಇದೇ ಪೊಲೀಸ್ ಠಾಣೆ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ರಾಮಯ್ಯ ಲೇಔಟ್ನಲ್ಲಿ ಪ್ರಿಯಲಕ್ಷ್ಮಿ ಎಂಬುವರು ಬೆಳಗ್ಗೆ 7.30ರಲ್ಲಿ ನಡೆದು ಹೋಗುತ್ತಿದ್ದಾಗ ಸರಗಳ್ಳರು ಇವರನ್ನು ಹಿಂಬಾಲಿಸಿಕೊಂಡು ಹೋಗಿ ಸಮಯ ಸಾಧಿಸಿ ಅವರು ಧರಿಸಿದ್ದ 80 ಗ್ರಾಂ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಸಣ್ಣ ಘಟನೆಯಾಗಿದ್ದರೂ ಮೇಲಾಧಿಕಾರಿಗಳಿಗೆ ವರದಿ ಮಾಡುವುದು ಕಡ್ಡಾಯ : ಏರ್ ಇಂಡಿಯಾ
ಯಶವಂತಪುರ:
ಜೆಪಿ ಪಾರ್ಕ್ ಬಳಿ ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ನಡೆದು ಹೋಗುತ್ತಿದ್ದ ಜಯಪ್ರಭ ಎಂಬುವರನ್ನು ಸರಗಳ್ಳರು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿ 50 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ.
ಪೀಣ್ಯ:
ಇಂದು ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಚೊಕ್ಕಸಂದ್ರದ ಬಳಿ ಹೋಗುತ್ತಿದ್ದ ಲಲಿತಮ್ಮ ಎಂಬುವರ 45 ಗ್ರಾಂ ಸರವನ್ನು ಸರಗಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸರ ಕಳೆದುಕೊಂಡ ಮಹಿಳೆಯರು ಆಯಾಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುದ್ದಿ ತಿಳಿದು ಉತ್ತರ ವಿಭಾಗದ ಪೊಲೀಸರು ತಕ್ಷಣ ಎಲ್ಲಾ ಕಡೆ ನಾಕಾ ಬಂಧಿ ಮಾಡಿ ಸರಗಳ್ಳರ ಬಂಧನಕ್ಕೆ ಶೋಧ ನಡೆಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ನಡೆದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಟಿವಿಗಳನ್ನು ಪರಿಶೀಲಿಸಿ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್ ಆಧರಿಸಿ ಸರಗಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
4 women, chain, theft, Bengaluru,