40% ಸೂತ್ರಧಾರರ ಪಾತ್ರ ಸದ್ಯದಲ್ಲೇ ಬಯಲಾಗಲಿದೆ : ಸಿ.ಟಿ.ರವಿ

Social Share

ಬೆಂಗಳೂರು,ಆ.25- ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿರುವ ಹಿಂದೆ ನಿರ್ದೇಶಕರು, ನಿರ್ಮಾಪಕರು ಹಾಗೂ ಸೂತ್ರದಾರಿಗಳು ಯಾರ್ಯಾರಿದ್ದಾರೋ ಎಲ್ಲವೂ ಕೂಡ ಸದ್ಯದಲ್ಲೇ ಹೊರಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಕಪ್ಪುಚುಕ್ಕೆ ತರಬೇಕೆಂಬ ದುರದ್ದೇಶದಿಂದ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಇದರ ಹಿಂದಿನ ಸೂತ್ರಧಾರರ ಹೆಸರುಗಳು ಕೂಡ ಸದ್ಯದಲ್ಲೇ ಗೊತ್ತಾಗಲಿದೆ ಎಂದು ತಿಳಿಸಿದರು.

ಗುತ್ತಿಗೆಯಲ್ಲಿ 40% ಕಮೀಷನ್ ಅವ್ಯವಹಾರ ನಡೆದಿದ್ದರೆ ಅಥವಾ ಯಾವುದಾದರೂ ಸಚಿವರು, ಶಾಸಕರು ಇಂತಿಷ್ಟೇ ಕಮೀಷನ್ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರೆ ಗುತ್ತಿಗೆದಾರರು ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಸಬೇಕು. ಅದನ್ನು ಬಿಟ್ಟು ಪ್ರತಿಪಕ್ಷದ ನಾಯಕರ ಮನೆಗೆ ಹೋಗಿದ್ದು ಯಾಕೆ ಎಂದು ಅವರು ಪ್ರಶ್ನಿಸಿದರು.

ಬಿಬಿಎಂಪಿ ಹಾಗೂ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವಾಗ ಇಂತಹ ಆರೋಪಗಳು ಸಹಜ. ಒಂದು ವೇಳೆ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದ್ದರೆ ಮುಖ್ಯಮಂತ್ರಿಗಳು ಇಲ್ಲವೇ ತನಿಖಾ ಸಂಸ್ಥೆಗೆ ದೂರು ಕೊಡಲಿ. ಪ್ರತಿಪಕ್ಷದ ನಾಯಕರ ಮನೆಯಲ್ಲಿ ಸಭೆ ನಡೆಸಿ ಬಳಿಕ ಸರ್ಕಾರದ ಮೇಲೆ ಭ್ರಷ್ಟಾಚರ ಆರೋಪ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಈಗಾಗಲೇ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಸಚಿವರು ಇದಕ್ಕೆ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಆದರೆ ಇದಕ್ಕೆ ಬೆಂಬಲ ಕೊಡುತ್ತಿರುವ ಸೂತ್ರಧಾರಿಗಳು ತಮ್ಮ ಅಧಿಕಾರ ಅವಧಿಯಲ್ಲಿ ಏನು ನಡೆದಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಪರೋಕ್ಷವಾಗಿ ಕಾಂಗ್ರೆಸ್‍ಗೆ ತಿರುಗೇಟು ನೀಡಿದರು.

ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಉತ್ಸವ ಆಚರಣೆಗೆ ನಾವು ಯಾರ ಬಳಿಯೂ ಅನುಮತಿಪಡೆಯಬೇಕಾದ ಅಗತ್ಯವಿಲ್ಲ. ನಾವು ಮಾಡುತ್ತಿರುವುದು ಗಣಪತಿ ಹಬ್ಬ. ಇದಕ್ಕೆ ಬೇರೊಬ್ಬರ ಅನುಮತಿ ಬೇಕಿಲ್ಲ ಎಂದರು.

ಗಣಪತಿ ಉತ್ಸವವನ್ನು ನಾವು ಅಫ್ಘಾನಿಸ್ತಾ, ಪಾಕಿಸ್ತಾನದಲ್ಲಿ ಆಚರಣೆ ಮಾಡುತ್ತಿಲ್ಲ. ಅದಕ್ಕೆ ಯಾರ ಅನುಮತಿಯೂ ಬೇಕಿಲ್ಲ. ಗಣಪತಿ ಹಬ್ಬ ಮಾಡುವವರು ಎಲ್ಲಿಯೂ ಬಾಂಬ್ ಹಾಕುವುದಿಲ್ಲ. ಅವರು ಭಯೋತ್ಪಾದಕರು ಅಲ್ಲ. ಗಣಪತಿ ಉತ್ಸವ ಒಗ್ಗಟ್ಟು ಮತ್ತು ಏಕತೆಯ ಸಂಕೇತ. ಈ ಉತ್ಸವ ಆಚರಿಸಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ ಎಂದು ಶಾಸಕ್ ಜಮೀರ್ ಅಹಮ್ಮದ್‍ಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

Articles You Might Like

Share This Article