ಬೆಂಗಳೂರು,ಆ.22- ಆಡಳಿತಾರೂಢ ಬಿಜೆಪಿಗೆ ತೀವ್ರ ಮುಜುಗರ ಸೃಷ್ಟಿಸಿದ್ದ ಗುತ್ತಿಗೆದಾರರ ಬಿಲ್ ಪಾವತಿಗೆ ಶೇ.40 ಕಮೀಷನ್ ಆರೋಪ ಮತ್ತೆ ಮುನ್ನಲೆಗೆ ಬಂದಿದೆ. ವಿವಿಧ ಇಲಾಖೆಗಳಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಬಿಲ್‍ಗಳು ಪಾವತಿಯಾಗಲು ಜನಪ್ರತಿನಿಧಿಗಳಿಗೆ ಶೇ.40 ಕಮೀಷನ್ ನೀಡಬೇಕು. ಕೂಡಲೇ ಪ್ರಧಾನಿ ನರೇಂದ್ರಮೋದಿ ಅವರು ಮಧ್ಯಪ್ರವೇಶಿಸಿ ಕ್ರಮ ವಹಿಸಬೇಕೆಂದು ರಾಜ್ಯ ಗುತ್ತಿಗೆದಾರರ ಸಂಘ ಕಳೆದ ವರ್ಷ ಪತ್ರ ಬರೆಯಲಾಗಿತ್ತು.
ಈ ಹೀಗೆ ಪತ್ರ ಬರೆದು ಹಲವು ತಿಂಗಳಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇದೀಗ ಗುತ್ತಿಗೆದಾರರ ಸಂಘ ಪುನಃ ಮತ್ತೊಮ್ಮೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲು ಮುಂದಾಗಿದೆ. ಕಳೆದ ಮೂರು ತಿಂಗಳ ಹಿಂದೆ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ, ಆಗಸ್ಟ್ 15ರಂದು ಪ್ರಧಾನಿ ಮೋದಿ ದೇಶಾದ್ಯಂತ ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮೊದಲು ನಿಮ್ಮ ಪಕ್ಷ ಅಧಿಕಾರದಲ್ಲಿ ನಡೆಯತ್ತಿರುವ ಭ್ರಷ್ಟಾಚಾರವನ್ನು ನಿಲ್ಲಿಸಿ ಇದಕ್ಕೆ ನಾವು ಸಾಕ್ಷ್ಯಾಧಾರಗಳನ್ನು ಕೊಡಲು ಸಿದ್ದರಿದ್ದೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತೊಮ್ಮೆ ಪ್ರಧಾನಿಗೆ ಪತ್ರ ಬರೆಯಲಿದ್ದಾರೆ.
ಸ್ವತಃ ಇದನ್ನು ಕೆಂಪಣ್ಣ ಅವರೇ ಖಚಿತಪಡಿಸಿದ್ದು, ಲೋಕೋಪಯೋಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಬೃಹತ್ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸೇರಿದಂತೆ ಕೆಲವು ಇಲಾಖೆಗಳಲ್ಲಿ ನಡೆಸಿದ ಕಾಮಗಾರಿಗೆ ಸಚಿವರಿಂದ ಹಿಡಿದು ಕೆಳಹಂತದ ಅಕಾರಿ ವರ್ಗದವರಿಗೆ ಶೇ.40ರಷ್ಟು ಕಮೀಷನ್ ನೀಡಿದರೆ ಮಾತ್ರಬಿಲ್ ಪಾವತಿಯಾಗುತ್ತದೆ.
ಇಷ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದ್ದರೂ ಮೋದಿಯವರು ಏಕೆ ಮೌನವಹಿಸಿದ್ದಾರೆ ಎಂದು ಕೆಂಪಣ್ಣ ಪ್ರಶ್ನಿಸಿದ್ದಾರೆ. ನಾವು ಮತ್ತೊಮ್ಮೆ ಪ್ರಧಾನಿಗೆ ಪತ್ರ ಬರೆಯುತ್ತೇವೆ. ದಾಖಲೆಗಳ ಸಮೇತ ವಿವರ ನೀಡುತ್ತೇವೆ. ಈಗಲಾದರೂ ಮೋದಿಯವರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.