ಎಚ್. ಡಿ. ಕೋಟೆ, ಜ.17- ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಳ್ಳೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ 40 ಕುಟುಂಬ ಸರಿಯಾದ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ಮೂಲ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದಾರೆ.
ತಾಲ್ಲೂಕಿನ ಡಿಬಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಚ್ಚೂರು ಗ್ರಾಮದ ಸಮೀಪವಿರುವ ಬೋಗಾಪುರ ಹಾಡಿಯಿಂದ ಕಳೆದ ಹತ್ತು ವರ್ಷಗಳಿಂದ 40 ಕುಟುಂಬಗಳನ್ನು ಹುಣಸೂರು ತಾಲ್ಲೂಕಿನ ಶೆಟ್ಟಹಳ್ಳಿ (ಲಕ್ಕಪಟ್ಟಣ) ಬಳಿ ಮನೆಗಳನ್ನು ನಿರ್ಮಿಸಿ ಜಮೀನುಗಳನ್ನು ತೋರಿಸಿ ಸ್ಥಳಾಂತರ ಮಾಡಲಾಗಿತ್ತು.
ಹತ್ತು ವರ್ಷ ಕಳೆದರೂ ನಮಗೆ ಸರ್ಕಾರ ನೀಡಬೇಕಿರುವ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ, ಜಮೀನುಗಳ ಆರ್‍ಟಿಸಿ ನೀಡಿಲ್ಲ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಗಳ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ ಹೀಗಾಗಿ ನಮಗೆ ಅಲ್ಲಿ ಸರಿಯಾದ ಸೌಲಭ್ಯ ಇಲ್ಲದಿರುವುದು ಜೀವನ ನಡೆಸಲು ತೀವ್ರ ತೊಂದರೆಯಾಗಿದ್ದು ನಾವು ಮೂಲ ಸ್ಥಳದಲ್ಲಿಯೇ ಜೀವನ ನಡೆಸುತ್ತೇವೆ ಇಲ್ಲಿಂದ ನಮ್ಮನ್ನು ಹೊರಹಾಕಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಹಾಕಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ನರಗುಂದ, ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನೀವು ಅರಣ್ಯದಲ್ಲಿ ಅಕ್ರಮ ಪ್ರವೇಶ ಮಾಡಿದಂತಾಗಿದ್ದು, ಇಲ್ಲಿಂದ ಹೊರಡಲೇ ಬೇಕು ಎಂದು ಸೂಚಿಸಿದರು. ಪಟ್ಟು ಬಿಡದ ಆದಿವಾಸಿಗಳು ನಾವು ಸತ್ತರೂ ಬದುಕಿದರೂ ಇಲ್ಲಿಯೇ, ನಾವು ಎಲ್ಲಿಗೂ ಹೋಗುವುದಿಲ್ಲ ನಮಗೆ ಸರ್ಕಾರವೇ ಮೋಸ ಮಾಡಿದೆ ಎಂದು ಆರೋಪಿಸಿದ್ದಾರೆ.
ನಾವು ದೇವಸ್ಥಾನದ ದೇವರ ಪೂಜೆಗೆಂದು ಇಲ್ಲಿಗೆ ಬಂದೆವು, ಆದರೆ ನಮಗೆ ಅಲ್ಲಿನ ಕಿರುಕುಳ ಎಲ್ಲವನ್ನು ನೆನೆಸಿಕೊಂಡರೆ ಇಲ್ಲಿಂದ ವಾಪಸ್ ಹೋಗುವುದೇ ಬೇಡ ಇಲ್ಲಿ ಗೆಡ್ಡೆ ಗೆಣಸು ತಿಂದು ಬದುಕುತ್ತೇವೆ ಸಾಮಾಜಿಕ ಜೀವನವೇ ನಮಗೆ ಬೇಡವೆಂದು ಅನಿಸುತ್ತಿದೆ ಎಂದು ತಿಮ್ಮಮ್ಮಅಳಲು ತೋಡಿಕೊಂಡರು.
ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿದರೆ ಕಾನೂನು ರೀತಿಯಲ್ಲಿ ಬಂಧಿಸಲಾಗುತ್ತದೆ. ಅವರ ಬೇಡಿಕೆಗಳನ್ನು ಅವರು ವಾಸ್ತವ್ಯ ಇರುವ ಪುನರ್ವಸತಿ ಕೇಂದ್ರದಲ್ಲಿಯೇ ಕೇಳಬೇಕು ಎಂದು ತಹಶೀಲ್ದಾರ್ ಎನ್.ಎಸ್. ನರಗುಂದ ತಿಳಿಸಿದರು.
18 ವರ್ಷ ಮೇಲ್ಪಟ್ಟವರಿಗೆ ತಲಾ 10 ಲಕ್ಷ ಹಣ ನೀಡುವ ಭರವಸೆಯನ್ನು ಈಡೇರಿಸಿಲ್ಲ, ನಮ್ಮಲ್ಲಿಯೇ ಇನ್ನೂ 5 ಕುಟುಂಬದವರಿಗೆ ಮನೆ ಮತ್ತು ಭೂಮಿ ನೀಡಿಲ್ಲ, ಸ್ಥಳೀಯವಾಗಿ ಸಾಮಾಜಿಕ ತೊಂದರೆಯಾಗುತ್ತಿದ್ದು, ಸ್ಥಳೀಯರಿಂದ ಕಿರುಕುಳವಾಗುತ್ತಿದೆ, ಹಾಡಿಯಲ್ಲಿ ಜೀವನ ನಡೆಸಲು ದುರದೃಷ್ಟಕರವಾಗಿದೆ ಎಂಜು ಗ್ರಾಪಂ ಸದಸ್ಯ ರಮೇಶ್ ತಿಳಿಸಿದರು.
