ನವದೆಹಲಿ,ಫೆ.1-ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ್ನು ಅಭಿವೃದ್ದಿಪಡಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಅವರು, ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ವಂದೇ ಭಾರತ್ ರೈಲುಗಳನ್ನು ಅಭಿವೃದ್ದಿಪಡಿಸುವುದಾಗಿ ಹೇಳಿದರು.
ಇದರ ಜತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ 2000 ಕಿ.ಮೀ ಉದ್ದದ ರೈಲು ಮಾರ್ಗವನ್ನು ಕವಚ್ ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಸ್ಥಳೀಯ ಉದ್ಯಮ ಪ್ರೋತ್ಸಾಹಿಸುವುದರೊಂದಿಗೆ ದೇಶದ ಸಣ್ಣ ರೈತರು ಹಾಗೂ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಎಂಬ ಹೊಸ ಯೋಜನೆ ರೂಪಿಸಲಾಗಿದೆ ಎಂದು ಅವರು ವಿವರಣೆ ನೀಡಿದರು.
