ದೇಶಕ್ಕೆ ಭ್ರಷ್ಟಾಚಾರ ಟ್ಯೂಶನ್ ಕೊಡುವಷ್ಟು ಕಡುಭ್ರಷ್ಟ ಯಾರಾದರೂ ಇದ್ದರೆ ಅದು ಡಿಕೆಶಿ : ಬಿಜೆಪಿ

Spread the love

ಬೆಂಗಳೂರು,ಏ.16- ಭ್ರಷ್ಟಾಚಾರದ ಬಗ್ಗೆ ದೇಶಕ್ಕೆ ಟ್ಯೂಶನ್ ಕೊಡುವಷ್ಟು ಕಡುಭ್ರಷ್ಟ ಎನ್ನುವವರೊಬ್ಬರಿದ್ದರೆ ಅದು ಡಿ.ಕೆ.ಶಿವಕುಮಾರ್ ಮಾತ್ರ ಎಂದು ಬಿಜೆಪಿ ಲೇವಡಿ ಮಾಡಿದೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ತಿಹಾರ್ ಜೈಲು ಸೇರಿ ಗಡ್ಡ ಬೆಳೆಸಿದ ಮಾತ್ರಕ್ಕೆ ಡಿಕೆ ಶಿವಕುಮಾರ್ ಅವರ ಪಾಪಕರ್ಮಗಳು ಬತ್ತಿ ಹೋಗುವುದೇ? ಭ್ರಷ್ಟತೆಯ ಪಾಪಕೂಪದಲ್ಲಿ ಮುಳುಗೇಳುತ್ತಿರುವವರು ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಹಾಸ್ಯಾಸ್ಪದವಲ್ಲವೇ? ಎಂದು ಪ್ರಶ್ನಿಸಿದೆ.

ಸುಮಾರು 50 ದಿನಗಳ ತಿಹಾರ್ ಜೈಲು ವಾಸ, ಜೈಲಿನಿಂದ ಬಂದ ಕೂಡಲೇ ಕೆಪಿಸಿಸಿ ಅಧ್ಯಕ್ಷ ಪಟ್ಟ ಇಷ್ಟೆಲ್ಲಾ ಗೌರವ ಯಾವುದೇ ಸ್ವತಂತ್ರ ಹೋರಾಟಕ್ಕಾಗಲ್ಲ ಅಕ್ರಮ ಸಂಪಾದನೆ ಮಾಡಿದ್ದಕ್ಕಾಗಿ ಹವಾಲ ವಹಿವಾಟು ನಡೆಸಿದ್ದಕ್ಕಾಗಿ ಇದೆಲ್ಲ ಕಾಂಗ್ರೆಸ್ ಬೋಧಿಸುವ ನೈತಿಕತೆಯೇ? ಎಂದು ಮರುಪ್ರಶ್ನೆ ಮಾಡಿದೆ.

ಎಂಬಿ ಪಾಟೀಲ್ ಎಂದ ಕೂಡಲೇ ಧರ್ಮ ವಿಭಜನೆ ಕಣ್ಣ ಮುಂದೆ ಬರುತ್ತದೆ. ರಾಜಕೀಯ ಲಾಭಕ್ಕಾಗಿ ಜಾತಿ ಒಡೆದು ಧರ್ಮ ರಾಜಕಾರಣ ಮಾಡುವಾಗ ಎಂಬಿ.ಪಾಟೀಲ್ ಅವರಿಗೆ ನೈತಿಕತೆ ನೆನಪಾಗಲಿಲ್ಲವೇ? ಸಮಾಜಘಾತುಕ ಸಂಘಟನೆಗಳಾದ ಪಿಎಫ್‍ಐ ಹಾಗೂ ಕೆಎಫ್‍ಡಿ ಮೇಲಿನ 1600ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ನಿಷೇಧ ಮಾಡಿದಾಗ ಎಂ.ಬಿ.ಪಾಟೀಲ್ ಗೃಹ ಸಚಿವರಾಗಿದ್ದರು.ಆಗ ಕಾಂಗ್ರೆಸ್ಸಿಗರ ನೈತಿಕತೆಗೆ ಏನಾಗಿತ್ತು? ಸಮಾಜ ಘಾತುಕರ ವಿರುದ್ಧ ಮೃದು ಧೊರಣೆ ತಾಳಿದ್ದು ನೈತಿಕವೇ? ಎಂದಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ, ನೀವು ಸಿಎಂ ಆಗಿದ್ದಾಗ ನಿಮ್ಮ ಬಲಗೈ ಬಂಟ ಮರಿಗೌಡ, ಅಂದಿನ ಮೈಸೂರು ಜಿಲ್ಲಾಧಿಕಾರಿಯ ಮೇಲೆ ಏಕವಚನದಲ್ಲಿ ಮಾತನಾಡಿ,  ಧಮ್ಕಿ ಹಾಕಿದ್ದು ನೆನಪಿದೆಯೇ? ಆರೋಪಿಯನ್ನು ರಕ್ಷಿಸಿ ಮಹಿಳಾ ಅಧಿಕಾರಿಯನ್ನೇ ಎತ್ತಂಗಡಿ ಮಾಡುವಾಗ ನಿಮ್ಮ ನೈತಿಕತೆಗೆ ತುಕ್ಕು ಹಿಡಿದಿತ್ತೇ? ಮಾನ್ಯ ಸಿದ್ದರಾಮಯ್ಯ ಅವರೇ ಬದಲಿ ನಿವೇಶನ ಹಂಚಿಕೆ ಹೆಸರಿನಲ್ಲಿ ಬಿಡಿಎನಲ್ಲಿ ಸಾವಿರಾರು ಕೋಟಿ ಹಗರಣ, ಗೋವಿಂದರಾಜ್ ಡೈರಿ ಹಗರಣ, ಪುತ್ರರತ್ನ ಯತೀಂದ್ರ ಅವರ ಮಲ್ಟಿ ಸ್ಪೆಷಾಲಿಟಿ ಲ್ಯಾಬ್ ಸ್ಥಾಪನೆಯ ಹಗರಣ? ಇದೆಲ್ಲ ಮಾಡುವಾಗ ನಿಮ್ಮ ನೈತಿಕತೆ ಎಲ್ಲಿ ಅಡಗಿತ್ತು? ಎಂದು ಪ್ರಶ್ನಿಸಿದೆ.

ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ್ ಅರಸು, ರಾಮಕೃಷ್ಣ ಹೆಗಡೆಯವರಂಥ ನಾಯಕರು ಕುಳಿತ ಜಾಗದಲ್ಲಿ ಕದ್ದ ವಾಚು ಕಟ್ಟಿ ಮೆರೆಯುವಾಗ ಸಿದ್ದರಾಮಯ್ಯ ಅವರಿಗೆ ನೈತಿಕತೆಯ ಪ್ರಶ್ನೆ ಮರೆತು ಹೋಗಿತ್ತೇ? ಅರ್ಕಾವತಿ ರೀಡು ಪ್ರಕರಣದಲ್ಲಿ ನೂರಾರು ಕೋಟಿ ನುಂಗಿದಾಗ ಎಲ್ಲಿ ಅಡಗಿತ್ತೋ ಆ ನಿಮ್ಮ ಶೌರ್ಯ? ಎಂದು ಟೀಕೆ ಮಾಡಿದೆ.

Facebook Comments