ಇಂದಿನಿಂದ 45 ವರ್ಷ ಮೇಲ್ಪಟ್ಟರಿಗೆ ಕೊರೋನಾ ಲಸಿಕೆ : ಸಚಿವ ಸುಧಾಕರ್

Spread the love

ಬೆಂಗಳೂರು, ಏ.1- ಇಂದಿನಿಂದ 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಅಗತ್ಯಕ್ಕನುಗುಣವಾಗಿ ಜಿಲ್ಲೆಗಳಿಗೆ ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಸುಮಾರು 1.66 ಕೋಟಿ 45 ವರ್ಷಕ್ಕೂ ಮೇಲ್ಪಟ್ಟ ಫಲಾನುಭವಿಗಳಿರುವುದಾಗಿ ಅಂದಾಜಿಸಲಾಗಿದೆ ಎಂದು ಸಚಿವರು ಟ್ವಿಟ್‍ನಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ 13.5 ಲಕ್ಷ ಕೋವಿಶೀಲ್ಡ್ , 1.5 ಲಕ್ಷ ಕೋವ್ಯಾಕ್ಸಿನ್ ಸೇರಿದಂತೆ ಒಟ್ಟು 15 ಲಕ್ಷ ಡೋಸ್ ಲಸಿಕೆ ಲಭ್ಯವಿದೆ. ಆಯಾ ಜಿಲ್ಲೆಗೆ ಅಗತ್ಯಕ್ಕನುಗುಣವಾಗಿ ಕೋವಿಡ್ ಲಸಿಕೆಯನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇಂದಿನಿಂದ 45 ವರ್ಷ ಮೇಲ್ಪಟ್ಟವರಿಗೆ 5 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ಜನರು ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆಯಬೇಕು. ಇದುವರೆಗೂ 3 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿತ್ತು. ಇಂದಿನಿಂದ 2 ಸಾವಿರ ಕೇಂದ್ರಗಳಲ್ಲಿ ಹೆಚ್ಚುವರಿಯಾಗಿ ಲಸಿಕೆ ನೀಡಲಾಗುತ್ತದೆ. ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಪರೀಕ್ಷಿಸಬೇಕೆಂಬ ಮಾರ್ಗಸೂಚಿ ಇದ್ದು, ಜಿಲ್ಲಾಡಳಿತ ಬಿಗಿಯಾದ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.