5 ಕಿ.ಮೀ ವ್ಯಾಪ್ತಿಗೊಂದು ಪೊಲೀಸ್ ಠಾಣೆ : ಗೃಹ ಸಚಿವ ಪರಮೇಶ್ವರ್

Parameshwar

ಬೆಂಗಳೂರು, ಫೆ.27-ಜನರಿಗೆ ಸೂಕ್ತ ರಕ್ಷಣೆ ನೀಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ರತಿ 3ರಿಂದ 5 ಕಿ.ಮೀ. ವ್ಯಾಪ್ತಿಯೊಳಗೆ ಹೊಸ ಪೊಲೀಸ್ ಠಾಣೆಗಳನ್ನು ಪುನರ್ ವಿಂಗಡಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು. ಗುರಪ್ಪನಪಾಳ್ಯದಲ್ಲಿ ಹೊಸ ಪೊಲೀಸ್ ಠಾಣೆ ಉದ್ಘಾಟಿಸಿ ಮಾತನಾಡಿದ ಅವರು, ಈ ಮೊದಲು 10ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಪೊಲೀಸ್ ಠಾಣೆ ಇತ್ತು. ಇದರಿಂದ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಕಳೆದ ಒಂದು ವರ್ಷದಿಂದ ಠಾಣೆಗಳ ಪುನರ್ ವಿಂಗಡಣೆ ನಡೆಯುತ್ತಿದೆ. ಈಗಾಗಲೇ 8 ಹೊಸ ಪೊಲೀಸ್ ಠಾಣೆಗಳು, ಒಂದು ಹೆಚ್ಚುವರಿ ಉಪ ವಲಯವನ್ನು ಸ್ಥಾಪಿಸಲಾಗಿದೆ ಎಂದರು.

ಪ್ರತಿ ಠಾಣೆಯಲ್ಲಿ 300ರಿಂದ 400 ಪ್ರಕರಣಗಳಿದ್ದು, ಅದಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾದರೆ ಅಂತಹ ಠಾಣೆಗಳನ್ನು ವಿಭಜಿಸಲಾಗುತ್ತಿದೆ. ಅಗತ್ಯಕ್ಕೆ ಅನುಗುಣವಾಗಿ ಮಾನವ ಸಂಪನ್ಮೂಲವನ್ನು ಒದಗಿಸಲಾಗುತ್ತಿದೆ. ಈಗಾಗಲೇ 12 ಸಾವಿರ ಪೊಲೀಸರನ್ನು ನೇಮಿಸಲಾಗಿದ್ದು, ಪ್ರತಿ ವರ್ಷ 4ರಿಂದ 5ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಪೊಲೀಸ್ ಠಾಣೆಗಳಲ್ಲೂ ಸಿಬ್ಬಂದಿಯ ಕೊರತೆ ಇಲ್ಲದಂತೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.  ನಗರದ ಆಗ್ನೇಯ ವಿಭಾಗದಲ್ಲಿಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನೂತನ ಬಂಡೇಪಾಳ್ಯ ಪೊಲೀಸ್ ಠಾಣೆ, ಬೇಗೂರು ಪೊಲೀಸ್ ಠಾಣೆ ಹಾಗೂ ಗುರಪ್ಪನಪಾಳ್ಯ ಪಾಳ್ಯ ಪೊಲೀಸ್ ಠಾಣೆಯನ್ನು ಉದ್ಘಾಟಿಸಿದರು.

ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗಕ್ಕೆ ಬಂಡೇಪಾಳ್ಯ ಪೊಲೀಸ್ ಠಾಣೆ, ಬೇಗೂರು ಪೊಲೀಸ್ ಠಾಣೆ ಹಾಗೂ ಮೈಕೋ ಲೇಔಟ್ ಉಪವಿಭಾಗ ವ್ಯಾಪ್ತಿಗೆ ಗುರಪ್ಪನಪಾಳ್ಯ ಪೊಲೀಸ್ ಠಾಣೆ ಒಳಪಡಲಿದೆ.   ಠಾಣೆ ಉದ್ಘಾಟನೆ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಗರ ಪೊಲೀಸ್ ಆಯುಕ್ತ ಪ್ರವೀಣ್ಸೂದ್, ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಸಿಪಿ ಬೋರಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin