ಶೀಘ್ರದಲ್ಲೇ 5 ಸಾವಿರ ಕಾನ್ಸ್ ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

Social Share

ಬೆಂಗಳೂರು,ಆ.4- ಗೃಹ ಇಲಾಖೆಯನ್ನು ಬಲಪಡಿಸುವ ಸದುದ್ದೇಶದಿಂದ ಶೀಘ್ರದಲ್ಲೇ ಪೊಲೀಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಾಗಿ ಮತ್ತೆ 5 ಸಾವಿರ ಕಾನ್ಸ್ ಸ್ಟೆಬಲ್ ಹುದ್ದೆ ನೇಮಕಾತಿ ಮಾಡಿಕೊಳ್ಳುತ್ತೇವೆ. 545 ಹುದ್ದೆ ಬಿಟ್ಟು 450 ಪಿಎಸ್‍ಐ ಗಳ ನೇಮಕಾತಿ ಹೊಸದಾಗಿ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ. ನಮ್ಮ ಅವಧಿಯಲ್ಲಿ ಹೇಗೆ ಪರೀಕ್ಷೆ ಮಾಡೋದು ಎಂಬುದನ್ನು ತೋರಿಸಿಕೊಡುತ್ತೇವೆ ಎಂದರು.

ಅಭ್ಯರ್ಥಿಗಳು ವಯಸ್ಸಿನ ಬಗ್ಗೆ ಭಯ ಪಡುವ ಅಗತ್ಯವಿಲ್ಲ. 545 ಹುದ್ದೆಯ ನೇಮಕಾತಿ ಅಧಿಸೂಚನೆ ಅವರ ವಯಸ್ಸಿನಲ್ಲಿ ಸಡಿಲಿಕೆ ಕೊಡಲಾಗುತ್ತದೆ. ಹೀಗಾಗಿ ಯಾರು ಆತಂಕ ಪಡುವ ಅವಶ್ಯತೆ ಇರೋದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಐಡಿ ತನಿಖೆ ಮುಗಿದ ನಂತರ ಪಿಎಸ್‍ಐ ಹುದ್ದೆ ಮರು ಪರೀಕ್ಷೆ ದಿನಾಂಕ ಪ್ರಕಟಿಸುತ್ತೇವೆ.

ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಯಾರು ಭಾಗಿಯಾದ ಆರೋಪ ಎದುರಿಸುತ್ತಿದ್ದಾರೋ ಅವರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕೊಡೋದಿಲ್ಲ. 545 ಹುದ್ದೆಗಳ ನೇಮಕಾತಿ ಅಧಿಸೂಚನೆ ರದ್ದು ಆಗೋದಿಲ್ಲ. ಆದರೆ, ಹೊಸದಾಗಿ ಪರೀಕ್ಷೆ ಮಾಡುತ್ತೇವೆ ಎಂದರು.

ಪರಪ್ಪನ ಅಗ್ರಹಾರ ಜೈಲಿಗೆ 2-3 ತಿಂಗಳ ಒಳಗೆ ಜಾಮರ್ ಹಾಕುವ ಪ್ರಕ್ರಿಯೆ ಮುಗಿಯುತ್ತದೆ. ಯಾರಿಗೂ ಮೊಬೈಲ್ ಕರೆ ಮಾಡೋದಕ್ಕೂ ಆಗಬಾರದು. ಅಕ್ರಮ ಚಟುವಟಿಕೆಗಳಿಗೆ ನಿಯಂತ್ರಣ ಹಾಕೋ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ತಿದ್ದೇವೆ.
ಹರ್ಷ ಕೊಲೆ ಆರೋಪಿಗಳ ವಿಡಿಯೋ ನೋಡಿ ನನಗೆ ತುಂಬಾ ನೋವಾಯಿತು. ಕೂಡಲೇ ಕ್ರಮ ತೆಗೆದುಕೊಂಡು ಜೈಲಿನ 15 ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ. 30 ಸಿಬ್ಬಂದಿಗಳನ್ನುಎತ್ತಂಗಡಿ ಮಾಡಲಾಗಿದೆ. ಈಗ ಜೈಲಿನಲ್ಲಿ ಹೊಸ ಸಿಬ್ಬಂದಿಗಳೇ ಇದ್ದಾರೆ. ಜೈಲಿನ ವ್ಯವಸ್ಥೆ ಸಂಪೂರ್ಣವಾಗಿ ಬದಲಾವಣೆ ಮಾಡುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಮಳೆ ಅವಾಂತರ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಮ್ಮ ಅಗ್ನಿಶಾಮಕ ಸಿಬ್ಬಂದಿಗಳು ವಾರದ 24 ಗಂಟೆ ಸಿದ್ದ ಇರಲು ಸೂಚನೆ ನೀಡಲಾಗಿದೆ. ಎಲ್ಲೇ ಮಳೆಯಿಂದ ಅನಾಹುತವಾದರೆ ಕೂಡಲೇ ಸ್ಥಳಕ್ಕೆ ಧಾವಿಸಿ ಕ್ರಮ ತೆಗೆದುಕೊಳ್ಳಬೇಕು. ಸದಾ ಸನ್ನದ್ದವಾಗಿ ಇರಬೇಕು ಎಂದು ಅಗ್ನಿ ಶಾಮಕ ಇಲಾಖೆಗೆ ಸೂಚನೆ ನೀಡಲಾಗಿದೆ.ಎಲ್ಲಾ ಜಿಲ್ಲಾ ಎಸ್ಪಿಗಳಿಗೂ ಸೂಚನೆ ನೀಡಲಾಗಿದೆ. ಸ್ಥಳೀಯ ಆಡಳಿತದ ಜೊತೆ ಪ್ರವಾಹ, ಮಳೆ ಅವಾಂತರ ನಿಭಾಯಿಸಲು ಕ್ರಮಕ್ಕೆ ಸೂಚನೆ ನೀಡಲಾಗಿದೆ ಹೇಳಿದರು.

Articles You Might Like

Share This Article