ದಾವಣಗೆರೆ, ಜ.15- ವಿಷಾಹಾರ ಸೇವಿಸಿದ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ದಾವಣಗೆರೆ ಜಿಲ್ಲಾಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿರುವ ಇಂದಿರಾಗಾಂಧಿ ಪರಿಶಿಷ್ಟ ಜಾತಿಯ ವಸತಿ ಶಾಲೆಯಲ್ಲಿ ನಡೆದಿದೆ. ಶಾಲೆಯಲ್ಲಿ ರಾತ್ರಿ ವೇಳೆಯ ಊಟ ಮಾಡಿದ ಮಕ್ಕಳಿಗೆ ಫುಡ್ ಪಾಯಿಜನ್ ಆಗಿದ್ದು, 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಅಸ್ವಸ್ಥರಾದ ಮಕ್ಕಳನ್ನು ತಕ್ಷಣ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ನೇರವಾಗಿ ಇಂದಿರಾ ಗಾಂಧಿ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕ ಎಂಪಿ ರೇಣುಕಾಚಾರ್ಯ ಅವರು ಮಕ್ಕಳ ಆರೋಗ್ಯ ವಿಚಾರಿಸಿ ಮಕ್ಕಳು ಹಾಗೂ ಪೋಷಕರಿಗೆ ಧೈರ್ಯ ಹೇಳಿದರು.
ಮಕ್ಕಳ ಆರೋಗ್ಯದಲ್ಲಿ ಹೆಚ್ಚು ಕಮ್ಮಿ ಆಗಿದ್ದರಿಂದ ಪೋಷಕರು ಆತಂಕದಲ್ಲಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಯತ್ತ ಧಾವಿಸಿದರು.50ಕ್ಕೂ ಹೆಚ್ಚು ಮಕ್ಕಳಿಗೆ ಫುಡ್ ಪಾಯಿಜನ್ ಆಗಿದ್ದು, ಆ್ಯಂಬುಲೆನ್ಸ್ ಸಹಾಯದಿಂದ ಸರ್ಕಾರಿ ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ರವಾನಿಸರುವುದರಿಂದ ಭಾರೀ ದುರಂತ ತಪ್ಪಿದೆ.
ಮಕ್ಕಳಿಗೆ ಔಷಧೋಪಚಾರ ಮಾಡುವಂತೆ ಆರೋಗ್ಯ ಇಲಾಖಾಕಾಧಿರಿಗಳಿಗೆ ಸೂಚನೆ ನೀಡಿದ ರೇಣುಕಾಚಾರ್ಯ ಆಸ್ಪತ್ರೆಯಲ್ಲೇ ಇದ್ದು, ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದರು.
