ನವದೆಹಲಿ, ಸೆ.24- ಇರಾನ್ ನಲ್ಲಿ ಭುಗಿಲೆದ್ದಿರುವ ಹಿಜಾಬ್ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 50ನ್ನು ದಾಟಿದ್ದು, ಪ್ರತಿಭಟನಾಕಾರರ ವಿರುದ್ಧ ಅನಗತ್ಯವಾದ ಬಲ ಪ್ರಯೋಗ ಮಾಡದಂತೆ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.
22 ವರ್ಷದ ಮಹ್ಸಾ ಅಮಿನಿ ಸರಿಯಾಗಿ ಹಿಜಾಬ್ ಧರಿಸಿಲ್ಲ ಎಂದು ಇರಾನ್‍ನ ನೈತಿಕ ಪೊಲೀಸರು ಆಕೆಯನ್ನು ಥಳಿಸಿ ಬಂಧಿಸಿದ್ದರು. ವಿಚಾರಣೆ ವೇಳೆ ಕುಸಿದು ಬಿದ್ದ ಆಕೆ ಚಿಕಿತ್ಸೆ ಪಡೆಯುವ ಹಂತದಲ್ಲಿ ಮೃತಪಟ್ಟಿದ್ದಳು. ಇದು ಇರಾನ್ ನಲ್ಲಿ ಪ್ರತಿಭಟನೆ ಭುಗಿಲೇಳಲು ಕಾರಣವಾಗಿದೆ. ಇರಾನ್ ಮಹಿಳೆಯರು ಬುರ್ಕಾ, ಹಿಜಾಬ್ ಕಿತ್ತೆಸೆದು ಬೀದಿಗಿಳಿದಿದ್ದಾರೆ.
ಪ್ರಗತಿಪರ ಪುರುಷರು ಅವರಿಗೆ ಸಾಥ್ ನೀಡಿದ್ದಾರೆ. ಇದರಿಂದ ದೇಶಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ಕೆಲವು ಕಡೆ ಹಿಂಸಾಚಾರ ನಡೆದಿದೆ. ತೆಹ್ರಾನ್ ಬೀದಿಯಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಸಮಾವೇಶಗೊಂಡು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಪ್ರತಿಭಟನೆಯನ್ನು ಹತ್ತಿಕ್ಕಲು ಮೂಲಭೂತವಾದಕ್ಕಂಟಿಕೊಂಡಿರುವ ಇರಾನ್ ಆಡಳಿತ ಬಲ ಪ್ರಯೋಗ ನಡೆಸುತ್ತಿದೆ. ಪದೇ ಪದೇ ಹಿಂಸಾಕೃತ್ಯಗಳು ನಡೆಯುತ್ತಿವೆ. ಗಿಲನ್ ಪ್ರಾಂತ್ಯದ ರೆಜ್ವಾನ್ಶಹರ್ ನಗರದಲ್ಲಿ ಭದ್ರತಾಪಡೆಗಳು ಗುಂಡು ಹಾರಿಸಿದಾಗ ಆರು ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಒಟ್ಟು ಸಾವುಗಳ ಸಂಖ್ಯೆ 50ನ್ನು ದಾಟಿದೆ. ಬಬೋಲ್, ಅಮೋಲ್ ಮತ್ತು ಉತ್ತರ ಇರಾನ್ ನ ಭಾಗದಲ್ಲಿ ಹಿಂಸಾಕೃತ್ಯಗಳಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ ಹೆಚ್ಚಾಗಿದೆ.
ತಡವಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡಿದ್ದು, ಪ್ರತಿಭಟನಾಕಾರರ ಮೇಲೆ ಸಮರ್ಥನಿಯವಲ್ಲದ ಹಾಗೂ ಅನಗತ್ಯವಾದ ಬಲ ಪ್ರಯೋಗ ಮಾಡದಂತೆ ಇರಾನ್ ಆಡಳಿತಕ್ಕೆ ತಾಕೀತು ಮಾಡಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗಟೆರೆಸ್, ಪರಿಸ್ಥಿತಿ ವಿಕೋಪಕ್ಕೆ ತಲುಪುವುದನ್ನು ನಿಯಂತ್ರಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ವಿಪರೀತವಾದ ಬಲ ಪ್ರಯೋಗ ನಡೆಯುತ್ತಿದೆ. ಹಲವಾರು ಮಂದಿ ಸಾವನ್ನಪ್ಪಿದ್ದಾರೆ, ನೂರಾರು ಮಂದಿ ಗಾಯಗೊಂಡಿದ್ದಾರೆ. ಸಂಬಂಧಿಸಿದ ಪ್ರಾಧಿಕಾರಗಳು ಸಹನೆಯಿಂದ ವರ್ತಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಬೇಕು, ಶಾಂತಿಯುತ ಪ್ರತಿಭಟನೆಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ನಡುವೆ ಇರಾನ್ ನ ಆಂತರಿಕ ವಿಚಾರದಲ್ಲಿ ಅಮೆರಿಕಾ ತಲೆ ಹಾಕಿದೆ. ಇರಾನ್ ನಲ್ಲಿ ಇಂಟರ್ ನೆಟ್ ಸ್ವಾತಂತ್ರ್ಯವನ್ನು ವಿಸ್ತರಣೆ ಮಾಡಲು ನೆರವು ನೀಡುವಂತೆ ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‍ಎಸ್‍ಎ) ತನ್ನ ಖಜಾನೆ ಮತ್ತು ರಾಜ್ಯ ಇಲಾಖೆಗೆ ಸೂಚನೆ ನೀಡಿದೆ. ಅಮಿನಿ ಸಾವಿನ ಬಳಿಕ ಪ್ರತಿಭಟನೆಗೆ ಇಳಿದಿರುವ ಧೈರ್ಯವಂತ ಇರಾನಿಗಳಿಗೆ ಅಮೆರಿಕಾ ಬೆಂಬಲ ವ್ಯಕ್ತ ಪಡಿಸಲಿದೆ. ಇರಾನಿ ಅಕಾರಿಗಳ ಜೊತೆಗಿನ ಉತ್ತರದಾಯಿತ್ವವನ್ನು ನಾವು ಮುಂದುವರೆಸುತ್ತೇವೆ ಎಂದು ಎನ್‍ಎಸ್‍ಎ ತಿಳಿಸಿದೆ.
ಇರಾನ್ ನಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದರಿಂದಾಗಿ ಇಂಟರ್ ನೆಟ್ ಸೇವೆಯ ವೇಗವನ್ನು ತಗ್ಗಿಸಲಾಗಿದೆ. ಜೊತೆ ಕೆಲ ಸಾಮಾಜಿಕ ತಾಲ ತಾಣಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಇರಾನ್ ಆಡಳಿತದಲ್ಲಿ ತಲೆ ಹಾಕಿದೆ.
ಸ್ಪೆಸ್‍ಎಕ್ಸ್ ಸಂಸ್ಥಾಪಕರೂ ಆದ ಟೆಲ್ಸಾ ಸಿಇಒ ಎಲೋನ್ ಮಸ್ಕ್, ಇರಾನ್ ನಲ್ಲಿ ಉಪಗ್ರಹ ಆಧಾರಿತ ಇಂಟರ್‍ನೆಟ್ ಸೇವೆ ಒದಗಿಸಲು ಸ್ಟಾರ್‍ಲಿಂಕ್‍ನ್ನು ಸಕ್ರಿಯಗೊಳಿಸುವುದಾಗಿ ಹೇಳಿದ್ದಾರೆ. ಅಮೆರಿಕಾದ ಉನ್ನತಾಕಾರಿಗಳು ಇರಾನ್‍ಗೆ ಇಂಟರ್‍ನೆಟ್ ಸೇವೆಯ ನೆರವು ನೀಡುವುದಾಗಿ ಹೇಳುತ್ತಿದ್ದಂತೆ ಎಲೋನ್ ಮಸ್ಕ್ ಸ್ಟಾರ್‍ಲಿಂಕ್ ಸಕ್ರಿಯಗೊಳಿಸುವ ಟ್ವೀಟ್ ಮಾಡಿದ್ದಾರೆ.
ಇರಾನ್ ಅಣು ಒಪ್ಪಂದಕ್ಕೆ ಒಳಪಡದ ಹಿನ್ನೆಲೆಯಲ್ಲಿ ಅಮೆರಿಕಾ ಇಸ್ಲಾಮಿಕ್ ರಿಪಬ್ಲಿಕ್ ದೇಶಗಳ ಮೇಲೆ ನಿರ್ಬಂಧಗಳನ್ನು ವಿಸಿದೆ. ಅದರ ಹೊರತಾಗಿಯೂ ಇರಾನ್‍ಗೆ ಇಂಟರ್ ನೆಟ್ ಸೇವೆ ಒದಗಿಸಲು ಅಮೆರಿಕಾ ಮುಂದಾಗಿದೆ.