500 ಕೋಟಿ ರೂ. ನಕಲಿ ಕಾಲ್ ಸೆಂಟರ್ ಹಗರಣದ ಸೂತ್ರಧಾರನ ಬಂಧನ
ಠಾಣೆ, ಅ.17-ಅಮೆರಿಕ ಮೂಲದ ತೆರಿಗೆ ಪಾವತಿದಾರರಿಂದ ಲಕ್ಷಾಂತರ ಡಾಲರ್ ಹಣ ಪಡೆದು ವಂಚಿಸಿದ್ದ ನಕಲಿ ಕಾಲ್ ಸೆಂಟರ್ ಹಗರಣದ ಸೂತ್ರಧಾರನಾದ ಮುಂಬೈ ಉದ್ಯಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕದ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಅಮೆರಿಕನ್ನರಿಂದ ಸುಮಾರು 500 ಕೋಟಿ ರೂ.ಗಳನ್ನು ವಂಚಿಸಿದ್ದ ಸಾಗರ್ ಟಕ್ಕರ್ನ ಗುರು ಮತ್ತು ಮಾರ್ಗದರ್ಶಕ 33 ವರ್ಷದ ಜಗದೀಶ್ ಕನಾನಿಯನ್ನು ಪೊಲೀಸರು ಬೋರಿವಲಿಯಲ್ಲಿ ಬಂಧಿಸಿದ್ದಾರೆ. ಈತನ ಬಂಧನದಿಂದ ಈ ಹಗರಣದಲ್ಲಿ ಷಾಮೀಲಾಗಿರುವ ಇನ್ನಷ್ಟು ದೊಡ್ಡ ಕುಳಗಳು ಬಲೆಗೆ ಬೀಳುವ ಸಾಧ್ಯತೆ ಇದೆ. ನಕಲಿ ಕಾಲ್ ಸೆಂಟರ್ ಹಗರಣದ ಪ್ರಮುಖ ಆರೋಪಿ ಸಾಗರ್ ಟಕ್ಕರ್ ಅಲಿಯಾಸ್ ಶಾಗ್ಗಿ ನಾಪ್ತತೆಯಾಗಿದ್ದು, ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.
ಮುಂಬೈ ಪೊಲೀಸರು ಕಳೆದ ವಾರ ಸುಮಾರು 750 ಬೋಗಸ್ ಕಾಲ್ ಸೆಂಟರ್ಗಳ ಉದ್ಯೋಗಿಗಳನ್ನು ಈ ಸಂಬಂಧ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಭಾರತದ ಟೆಲಿಕಾಲರ್ಗಳ ಸೋಗಿನಲ್ಲಿ ಇವರು ಅನೇಕ ಭಾರತ ಮೂಲದ ಅಮೆರಿಕನ್ನರು, ಅನಿವಾಸಿ ಭಾರತೀಯರು ಮತ್ತು ಅಮೆರಿಕನ್ನರಿಗೆ ತೆರಿಗೆ ಬಾಕಿ ಇದೆ ಎಂದು ಸುಳ್ಳು ಕರೆ ಮಾಡಿ ಸುಮಾರು 500 ಕೋಟಿ ರೂ.ಗಳನ್ನು ವಂಚಿಸಿದ್ದರು.