ಹಾಸನ,ಆ.5- ರಾಜ್ಯಾದ್ಯಾಂತ ನಿರಂತರವಾಗಿ ಸುರಿಯುತ್ತಿರುವ ಮಳೆ ಜನ ಜೀವನ ಅಸ್ತವ್ಯಸ್ತಗೊಳಿಸಿದ್ದು, ಅತಿವೃಷ್ಠಿ ಪರಿಹಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 500 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರೊಂದಿಗೆ ಶ್ರವಣಬೆಳಗೊಳದಲ್ಲಿ ಮಳೆಯಿಂದ ಹಾನಿಗೀಡಾಗಿರುವ ವಿಂದ್ಯಗಿರಿ ಬೆಟ್ಟ, ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಕೋಪ ನಿರ್ವಹಣೆಗೆ ಹಣದ ಕೊರತೆ ಎಲ್ಲೂ ಬಾರದಂತೆ ನೋಡಿಕೊಂಡಿದ್ದೇವೆ. ಕಂದಾಯ ಇಲಾಖೆಯಲ್ಲಿ ಹೊಸ ನೀತಿ ಜಾರಿಗೆ ತಂದು, ಪ್ರತ್ಯೇಕ ಸಾಫ್ಟ್ವೇರ್ ಬಳಸಿ ಬೆಳೆಹಾನಿ ಪ್ರದೇಶಗಳ ತ್ವರಿತ ಸಮೀಕ್ಷೆ ನಡೆಸಿ ತಿಂಗಳೊಳಗೆ ಪರಿಹಾರ ಒದಗಿಸಲಿದೆ. ಇನ್ನೂ ಮೂರು ದಿನದಲ್ಲಿ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿ ಪ್ರಾರಂಭ ಮಾಡಲಾಗುವುದು ಎಂದು ಅಶೋಕ್ ಹೇಳಿದರು.
ಬೆಳೆ ಹಾನಿ ಪರಿಹಾರ ಒಂದು ತಿಂಗಳೊಳಗೆ ನೀಡುತ್ತಿದ್ದು, 2 ಸಾವಿರ ಕೋಟಿ ರೂ.ಗಳಿ ಗಿಂತ ಹೆಚ್ಚಿನ ಹಣವನ್ನು ರೈತರ ಖಾತೆಗೆ ಹಾಕುವ ಕೆಲಸ ಮಾಡುತ್ತಿದ್ದೇವೆ. ಮಳೆಗಾಲದಲ್ಲಿ ಎಲ್ಲಿ ಮನೆಗಳಿಗೆ ನೀರು ನುಗ್ಗಿದೆಯೋ ಅವರಿಗೆ ಹತ್ತು ಸಾವಿರ ಪರಿಹಾರ ಹಾಗೂ ಹದಿನೈದು ದಿನಕ್ಕೆ ಆಗುವಷ್ಟು ಫುಡ್ಕಿಟ್ ಕೊಡಲು ಸೂಚಿಸಲಾಗಿದೆ ಎಂದರು.
ಎಲ್ಲಾ ಜಿಲ್ಲಾ ಮಂತ್ರಿಗಳು ಪ್ರವಾಸ ಮಾಡುತ್ತಿದ್ದಾರೆ. ಒಟ್ಟಾರೆ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಅಧಿಕಾರಿಗಳು , ಯಾರೂ ಕೂಡ ರಜೆ ಹಾಕದೆ ಜನರ ಪರವಾಗಿ ನಿಲ್ಲಬೇಕು, ಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸಬೇಕು, ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟು 14 ಜಿಲ್ಲಾಗಳು ಪ್ರವಾಹ ಪೀಡಿತವಾಗಿದ್ದು, 115 ಗ್ರಾಮಗಳು ಜಲಾವೃತಗೊಂಡಿವೆ. 14,902 ಮಂದಿ ತೊಂದರೆಗೀಡಾಗಿದ್ದಾರೆ. 64 ಜನ ವಿಕೊಪಕ್ಕೆ ಬಲಿಯಾಗಿದ್ದಾರೆ. 16 ಮಂದಿ ಸಿಡಿಲು ಬಡಿದು, ನಾಲ್ವರು ಮರ ಬಿದ್ದು, 15 ಮಂದಿ ಮನೆ ಕುಸಿತದಿಂದ, 19 ಮಂದಿ ಪ್ರವಾಹದ ಸೆಳತಕ್ಕೆ ಸಿಕ್ಕಿ, 9 ಮಂದಿ ಭೂ ಕುಸಿತದಿಂದ, ಇಬ್ಬರು ವಿದ್ಯುತ್ ಅಪಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸಚಿವರು ವಿವರಿಸಿದರು.
ರಾಜ್ಯದಲ್ಲಿ ಒಟ್ಟಾರೆ 15,074 ಮನೆಗಳು ಹಾನಿಗೀಡಾಗಿವೆ .ಇದರಲ್ಲಿ 608 ಮನೆಗಳು ಸಂಪೂರ್ಣ ಹಾನಿಯಾಗಿವೆ. 2,445 ಮನೆಗಳಿಗೆ ತೀವ್ರ ಹಾನಿ ಸಂಭವಿಸಿದ್ದು, ಉಳಿದವು ಭಾಗಶಃ ಕುಸಿದಿವೆ. ಒಟ್ಟು 8057 ಜನರನ್ನು ಸ್ಥಾಳಂತರ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ 64 ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ . ಕಾಳಜಿ ಕೇಂದ್ರದಲ್ಲಿ 6,933 ಜನರು ಆಶ್ರಯ ಪಡೆದಿದ್ದು, ಅವರಿಗೆ ಗುಣಮಟ್ಟದ ಊಟೋಪಚಾರ ನೀಡಲಾಗುತ್ತಿದೆ . ಜೊತೆಗೆ ಮೊಟ್ಟೆಯನ್ನು ಸಹ ನೀಡಲು ತಿಳಿಸಲಾಗಿದೆ ಎಂದು ಸಚಿವರು ಹೇಳಿದರು.
ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಉಪವಿಭಾಗಾಧಿಕಾರಿ ಜಗದೀಶ್ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.