ರಾಜ್ಯಾದ ನೆರೆಪೀಡಿತ ಪ್ರದೇಶಗಳಿಗೆ 500 ಕೋಟಿ ಪರಿಹಾರ ಬಿಡುಗಡೆ : ಸಿಎಂ

Social Share

ಮಂಗಳೂರು,ಜು.13- ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ವಿವಿಧ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ತುರ್ತಾಗಿ ಪರಿಹಾರ ಕಾರ್ಯ ಕೈಗೊಳ್ಳಲು ತತ್‍ಕ್ಷಣವೇ 500 ಕೋಟಿ ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಾಪಕ ಮಳೆಯಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಯಾವ ಯಾವ ಭಾಗದಲ್ಲಿ ಹೆಚ್ಚಿನ ಹಾನಿ ಉಂಟಾಗಿದೆಯೋ ಅಂತಹ ಕಡೆ ಪರಿಹಾರ ಕಾರ್ಯ ಕೈಗೊಳ್ಳಲು 500 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದರು. ಪರಿಹಾರ ಹಾಗೂ ದುರಸ್ತಿ ಕಾರ್ಯ ಕೈಗೊಳ್ಳಲು ಸರ್ಕಾರದ ಬಳಿ ಹಣಕಾಸಿನ ಕೊರತೆ ಇಲ್ಲ. ಹೆಚ್ಚಿನ ಮಳೆಯಾಗುತ್ತಿರುವುದು ಹಾಗೂ ಈಗಲೂ ಕೂಡ ನೆರೆ ಹಾವಳಿ ಇರುವುದರಿಂದ ವಿಳಂಬವಾಗಿದೆ. ಆದರೂ ಸರ್ಕಾರ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

ರಾಜ್ಯದ ಕೆಲವು ಭಾಗಗಳಲ್ಲಿ ಪದೇ ಪದೇ ಭೂಕಂಪ ಉಂಟಾಗಿ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಭೂಕಂಪ ಮತ್ತು ಭೂ ಕುಸಿತದ ಬಗ್ಗೆ ಅಮೃತ ವಿಶ್ವವಿದ್ಯಾಲಯದವರು ಅಧ್ಯಯನ ನಡೆಸಲು ಸೂಚಿಸಲಾಗಿದೆ. ಅವರ ವರದಿ ಸರ್ಕಾರದ ಕೈಗೆ ಸೇರಿದ ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಲಾಗುವುದು. ಪರಿಹಾರವನ್ನು ನೀಡಲು ಸರ್ಕಾರ ಸಿದ್ದವಿದೆ ಎಂದು ಭರವಸೆ ನೀಡಿದರು.

ಕಡಲ್ಕೊರೆತಕ್ಕೆ ಎಡಿಬಿ ಮೂಲಕ 300 ಕೋಟಿ ಹಣ ಖರ್ಚಾಗಿದೆ. ಕೇರಳ ಮಾದರಿಯಲ್ಲಿ ನಾವು ಕೂಡ ಒಂದು ಕಿ.ಮೀ ಕಡಲಿಗೆ ತಡೆಗೋಡೆ ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಶೀಘ್ರದಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ ಎಂದರು.

ತಡೆಗೋಡೆ ನಿರ್ಮಾಣ ಸಂಬಂಧ ಉನ್ನತಮಟ್ಟದ ಸಮಿತಿ ರಚನೆ ಮಾಡಲಾಗುವುದು. ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಇದನ್ನು ಅನುಷ್ಠಾನ ಮಾಡಲಾಗುವುದು. ಪದೇ ಪದೇ ಕರಾವಳಿ ಭಾಗದಲ್ಲಿ ಉಂಟಾಗುತ್ತಿರುವ ಕಡಲ್ಕೊರೆತವನ್ನು ಶಾಶ್ವತವಾಗಿ ತಡೆಗಟ್ಟಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಸಿಎಂ ಆಶ್ವಾಸನೆ ನೀಡಿದರು.

ಕಳೆದ ವರ್ಷನಾವು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರಿಂದ ಹೆಚ್ಚಿನ ಹಾನಿ ಉಂಟಾಗಿಲ್ಲ. ಜಿಲ್ಲಾ ಮಟ್ಟದಲ್ಲಿ ತಕ್ಷಣ ಇದನ್ನು ತಡೆಗಟ್ಟಲು ಸಂಬಂಧಪಟ್ಟ ಅಕಾರಿಗಳಿಗೆ ಸೂಚಿಸಲಾಗಿದೆ. ಯಾರೂ ಕೂಡ ಆತಂಕಕ್ಕೆ ಒಳಗಾಗಬಾರದು ಎಂದು ಸಲಹೆ ಮಾಡಿದರು. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಮಳೆಯಾಗುತ್ತಿರುವುದರಿಂದ ಅಲ್ಲಿಗೆ ಭೇಟಿ ಕೊಡಲು ಸಾಧ್ಯವಾಗಿಲ್ಲ.

ಮುಂದಿನ ವಾರ ಅಲ್ಲಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದೇನೆ ಎಂದರು. ಬೆಳಗಾವಿ, ಉತ್ತರಕನ್ನಡ ಹಾಗೂ ಇತರೆ ಜಿಲ್ಲೆಗಳಿಗೆ ಭೇಟಿ ನೀಡಲಾಗುವುದು. ನೆರೆ ಕುರಿತು ಉಂಟಾಗಿರುವ ನಷ್ಟದ ಬಗ್ಗೆ ವರದಿ ನೀಡುವಂತೆ ಜಿಲ್ಲಾಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

Articles You Might Like

Share This Article