ಆಗಸ್ಟ್ 15 ರಂದು 5000 ಮನೆಗಳ ಲೋಕಾರ್ಪಣೆ : ಸಚಿವ ಸೋಮಣ್ಣ

ಬೆಂಗಳೂರು, ಜೂ. 25- ಆಗಸ್ಟ್ 15 ರಂದು ರಾಜೀವ್ ಗಾಂಧಿ ವಸತಿ ನಿಗಮದಿಂದ 5000 ಮನೆಗಳನ್ನ ಲೋಕಾರ್ಪಣೆ ಮಾಡುತ್ತಿದ್ದೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು‌. ವಿಕಾಸಸೌಧದಲ್ಲಿ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಯಾರಿಗೆ ಅವಶ್ಯಕತೆ ಇದೆಯೋ ಅಂಥವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 46 ಸಾವಿರ ಮನೆ ಪ್ರಾರಂಭ ಮಾಡಿದ್ದೇವೆ ಎಂದು ಅವರು ಹೇಳಿದರು‌.

ಒಂದು ಲಕ್ಷ ಮನೆಗಳ ಗುರಿ ತಲುಪುವುದಕ್ಕೆ ಪ್ರಯತ್ನಿಸಲಾಗುತ್ತಿದ್ದು, 2022ರ ನವೆಂಬರ್ ತಿಂಗಳ ಒಳಗೆ 80 ಸಾವಿರ ಮನೆಗಳನ್ನು ಬೆಂಗಳೂರು ನಗರ ಜಿಲ್ಲೆ ಅರ್ಹರಿಗೆ ನೀಡುವ ವಿವಿಧ ಕೆಲಸ ಪ್ರಾರಂಭ ಆಗಿದೆ. ಬಿಡಿಎ ವ್ಯಾಪ್ತಿಯನ್ನು ಮೀರಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಮನೆಗಳ ನಿರ್ಮಾಣ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು‌.
ಕಂದಾಯ ಇಲಾಖೆಯಿಂದ 515 ಎಕರೆ ಜಾಗ ಪಡೆದಿದ್ದೇವೆ.

42361 ಮನೆಗಳ ನಿರ್ಮಾಣ ಹಂತದಲ್ಲಿ ಇದೆ. ಪ್ರಧಾನಿಯವರ ದೂರದೃಷ್ಟಿ ಚಿಂತನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಕೈ ಜೋಡಿಸುವುದು ನಮ್ಮ ಉದ್ದೇಶ. ಒಂದು ಲಕ್ಷ ಮನೆಗಳ ನಿರ್ಮಾಣ ಕಾರ್ಯ ಕೋವಿಡ್ ನಿಂದ ವಿಳಂಬ ಆಗಿತ್ತು ಎಂದ ಅವರು, ಒಂದಿಂಚೂ ಜಾಗವನ್ನು ಹಿಂದಿನ ಸರ್ಕಾರ ತೆಗೆದುಕೊಂಡಿರಲಿಲ್ಲ. ಫಲಾನುಭವಿಗಳ ಆಯ್ಕೆಗೆ ಹಿಂದೆ 87ಸಾವಿರ ರೂ. ಆದಾಯ ನಿಗದಿಪಡಿಸಲಾಗಿತ್ತು.

65 ಸಾವಿರ ಕುಟುಂಬಗಳಿಗೆ ಆಯ್ಕೆ ಪತ್ರ ಈ ಹಿಂದೆ ನೀಡಲಾಗಿತ್ತು ಎಂದು ಅವರು ಹೇಳಿದರು. ಗುತ್ತಿಗೆದಾರರ ಕಾರ್ಯವೈಖರಿ ಬಗ್ಗೆಯೂ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.