ಕೋಹಿಮಾ, ಆ.12- ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ಪಿಎಂ-ಕಿಸಾನ್ ಸನ್ಮಾನ್ ನಿಧಿ ಯೋಜನೆಯಲ್ಲೂ ಅನರ್ಹ ಫಲಾನುಭವಿಗಳು ನುಸುಳಿದ್ದು, ನಾಗಲ್ಯಾಂಡ್ ಸರ್ಕಾರ ತಪ್ಪಿತಸ್ಥರನ್ನು ಗುರುತಿಸಿ ಹಣ ವಸೂಲಿಗೆ ಮುಂದಾಗಿದೆ.
ನಾಗಾಲ್ಯಾಂಡ್ ಕೃಷಿ ಇಲಾಖೆ ಗುರುತಿಸಿರುವ ಪ್ರಕಾರ 524 ಅನರ್ಹ ಫಲಾನುಭವಿಗಳಿದ್ದು, ಅವರಿಂದ 45.08 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕಳೆದ ವರ್ಷದ ಜುಲೈನಲ್ಲಿ ಸಂಸತ್‍ಗೆ ಮಾಹಿತಿ ನೀಡಿದ ಬಳಿಕ, ಅನರ್ಹರನ್ನು ಗುರುತಿಸುವ ಕಾರ್ಯ ಆರಂಭಿಸಲಾಗಿದೆ ಎಂದು ನಾಗಾಲ್ಯಾಂಡ್‍ನ ಕೃಷಿ ಇಲಾಖೆ ಆಯುಕ್ತ ವೈ.ಕಿಖೆತೋ ಸಿಮಾ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ ಒಟ್ಟು ಆರು ಸಾವಿರದಂತೆ ರೈತರಿಗೆ ನೀಡಲಾಗುತ್ತಿದೆ. ನಾಗಾಲ್ಯಾಂಡ್‍ನ 10 ಜಿಲ್ಲೆಗಳ ಮತ್ತು ಉಪವಿಭಾಗದಲ್ಲಿ ಅನರ್ಹರ ಹೆಸರುಗಳು ಕಂಡು ಬಂದಿವೆ, ಸರ್ಕಾರದ ನಿವೃತ್ತ ನೌಕರರು, ವಿದ್ಯಾರ್ಥಿಗಳು ಮತ್ತು ನಗರ ವಾಸಿಗಳು ಯೋಜನೆಯ ಫಲಾನುಭವಿಗಳಾಗಿದ್ದಾರೆ, ಅವರ ಹೆಸರನ್ನು ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.
ನಕಲಿಗಳು ಪತ್ತೆಯಾಗುತ್ತಿದ್ದಂತೆ ಕೃಷಿ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ಕೇಂದ್ರ ಸರ್ಕಾರದಿಂದ ಪಡೆದ ನೆರವನ್ನು ವಸೂಲಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ, ಈವರೆಗೂ 5 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ. 2019ರ ಫೆಬ್ರವರಿ 25ರಿಂದ ಕಿಸಾನ್ ಸನ್ಮಾನ್ ನಿಧಿ ಯೋಜನೆ ಜಾರಿಗೆ ಬಂದಿದೆ. ಸುಮಾರು 2,02,113 ರೈತರಿಗೆ 316 ಕೋಟಿ ರೂಪಾಯಿಗಳನ್ನು ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.