6ನೇ ವೇತನ ಆಯೋಗದ ಶಿಫಾರಸುಗಳ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ : ಸಿಎಂ

6th-Pay--02
ಬೆಂಗಳೂರು, ಜ.31- ಆರನೇ ವೇತನ ಆಯೋಗದ ಶಿಫಾರಸುಗಳನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರಿ ನೌಕರರಲ್ಲಿ ಆಶಾ ಭಾವನೆ ಮೂಡಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವೇತನ ಪರಿಷ್ಕರಣೆ ಮಾಡಿ ಸರ್ಕಾರಿ ಸೇವೆಯಲ್ಲಿದ್ದ ಮತ್ತು ನಿವೃತ್ತಿಯಾದ ನೌಕರರಿಗೆ ಬಂಪರ್ ಕೊಡುಗೆ ನೀಡಲು ನಿರ್ಧರಿಸಲಾಗಿದ್ದು, ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಲ್ಲಿಕೆಯಾದ ಆರನೇ ವೇತನ ಆಯೋಗದ ವರದಿಯನ್ನು ಆದಷ್ಟು ಶೀಘ್ರ ಸಂಪುಟದಲ್ಲಿ ಚರ್ಚಿಸಿ ಜಾರಿಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಮತ್ತು ಮುಂದಿನ ಬಜೆಟ್ ಅಧಿವೇಶನದಲ್ಲಿ ಅಗತ್ಯವಾದ ಹಣಕಾಸು ಸೌಲಭ್ಯ ಒದಗಿಸಲು ಚಿಂತನೆ ನಡೆದಿದೆ. [ 6ನೇ ವೇತನ ಆಯೋಗ ವರದಿ ಸಲ್ಲಿಕೆ : ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್..! ]

ವರದಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾಲ ಕಾಲಕ್ಕೆ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಮಾಡುತ್ತದೆ. ನಮ್ಮ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸ್‍ಮೂರ್ತಿ ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು. ಮೊಹಮ್ಮದ್ ಸನಾವುಲ್ಲ ಮತ್ತು ಆರ್.ಎಸ್. ಫೋನ್‍ದೆನ್ ಸಮಿತಿಯ ಸದಸ್ಯರಾಗಿದ್ದರು. ಇಂದು ಅವರು ವೇತನ ಪರಿಷ್ಕರಣೆಗೆ ಸಂಬಂಧಪಟ್ಟಂತೆ ವರದಿ ನೀಡಿದ್ದಾರೆ.

ಸಮಿತಿಯ ಕಾಲಾವಧಿಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. ವೇತನೇತರ ವಿಷಯಗಳ ಕುರಿತು ಚರ್ಚೆ ನಡೆಸಿ ಸಮಿತಿ ಎರಡನೇ ಹಾಗೂ ಅಂತಿಮ ವರದಿ ನೀಡಲಿದೆ. ಆ ವರದಿಯಲ್ಲಿ ನೌಕರರ ಕಾರ್ಯ ದಕ್ಷತೆಯ ಹೆಚ್ಚಳ ಮತ್ತು ಇಲಾಖೆಯಿಂದ ಇಲಾಖೆಗಳ ನಡುವೆ ಇರುವ ವೇತನ ತಾರತಮ್ಯದ ನಿವಾರಣೆಗೆ ಶಿಫಾರಸುಗಳನ್ನು ಸಮಿತಿ ಮಾಡಲಿದೆ ಎಂದರು. ಅತ್ಯಂತ ಕಡಿಮೆ ಅವಧಿಯಲ್ಲಿ ಶ್ರೀನಿವಾಸ್‍ಮೂರ್ತಿ ನೇತೃತ್ವದ ಆಯೋಗ ವರದಿ ನೀಡಿದೆ. ಇದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

Sri Raghav

Admin