6ನೇ ವೇತನ ಆಯೋಗ ವರದಿ ಸಲ್ಲಿಕೆ : ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್..!

6th-Pay--02

ಬೆಂಗಳೂರು, ಜ.31- ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ರಚಿಸಲಾಗಿದ್ದ 6ನೇ ವೇತನ ಆಯೋಗ ಇಂದು ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದ್ದು, ಎಲ್ಲಾ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ.30ರಷ್ಟು ವೇತನ ಹೆಚ್ಚಿಸಬೇಕು ಎಂದು ಶಿಫಾರಸು ಮಾಡಿದೆ. ಇಂದು ಸಲ್ಲಿಕೆಯಾದ ಈ ವರದಿಯನ್ನು ಮುಂದಿನ ವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವ ಮೂಲಕ ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲು ಪ್ರಯತ್ನಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ವರದಿ ನೀಡಿರುವ ವೇತನ ಆಯೋಗದ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್‍ಮೂರ್ತಿ ಅವರು ಏ.1ರಿಂದಲೇ ವೇತನ ಪರಿಷ್ಕರಣೆಯನ್ನು ಜಾರಿಗೆ ತರುವಂತೆ ಶಿಫಾರಸು ಮಾಡಿದ್ದಾರೆ.

ಶ್ರೀನಿವಾರ್ಸ್‍ಮೂರ್ತಿ ಅವರ ವರದಿಯಂತೆ ಶೇ.30ರಷ್ಟು ವೇತನ ಪರಿಷ್ಕರಣೆಯಾದರೆ ಡಿ ಗ್ರೂಪ್ ನೌಕರರ ಆರಂಭಿಕ ಮೂಲ ವೇತನ 9600ರಿಂದ 17ಸಾವಿರ ರೂ.ಗೆ ಹೆಚ್ಚಳವಾಗಲಿದೆ. ಅದೇ ರೀತಿ ಇತರೆ ಶ್ರೇಣಿಯ ನೌಕರರ ವೇತನದಲ್ಲೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ. ರಾಜ್ಯ ಸರ್ಕಾರದಲ್ಲಿ ಕೆಲಸ ನಿರ್ವಹಿಸುತ್ತಿರುವ 5.20ಲಕ್ಷ ನೌಕರರಿಗೆ 5.73 ಲಕ್ಷ ಪಿಂಚಣಿದಾರರಿಗೆ, 70 ಸಾವಿರ ಅನುದಾನಿತ ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳು ಸೇರಿ ಒಟ್ಟು 12 ಲಕ್ಷ ಮಂದಿಗೆ ವೇತನ ಪರಿಷ್ಕರಣೆಯ ಲಾಭವಾಗಲಿದೆ. ಆರನೇ ವೇತನ ಆಯೋಗದ ವರದಿ ಯಥಾವತ್ತು ಜಾರಿಯಾದರೆ ರಾಜ್ಯ ಸರ್ಕಾರಕ್ಕೆ ಪ್ರತೀ ವರ್ಷ 10,508 ಕೋಟಿ ರೂ.ಗಳ ಹೊರೆಯಾಗಲಿದೆ. ಮೂಲ ವೇತನದಲ್ಲಿ ಶೇ.30ರಷ್ಟನ್ನು ಏರಿಕೆ ಮಾಡಿ ಆ ದಿನಾಂಕದಂದು ಪಾವತಿಸಲಾಗುವ ಶೇ.45.25ರ ತುಟ್ಟಿ ಭತ್ಯೆಯನ್ನು ವಿಲೀನಗೊಳಿಸಿ ವೇತನ ಪರಿಷ್ಕರಣೆ ಮಾಡಲು ಲೆಕ್ಕಾಚಾರ ಹಾಕಲಾಗಿದೆ.

ವೇತನ ಪರಿಷ್ಕರಣೆಯ ನಂತರ ಕನಿಷ್ಠ ವೇತನವು 17ಸಾವಿರ ರೂ.ಗಳಾಗಿದ್ದು, ಗರಿಷ್ಠ ವೇತನ 1,50,600ರೂ ಮತ್ತು ಭತ್ಯೆಗಳು ಒಳಗೊಂಡಿರುತ್ತವೆ. ಕನಿಷ್ಠ ಪಿಂಚಣಿ ತಿಂಗಳಿಗೆ 8500ರೂ. ಗರಿಷ್ಠ 75,300ರೂ.ಗಳಷ್ಟು ಮತ್ತು ತುಟ್ಟಿ ಭತ್ಯೆ ಒಳಗೊಂಡಿರುತ್ತದೆ. ಕುಟುಂಬ ಪಿಂಚಣಿ ಗರಿಷ್ಠ ಮಿತಿ ತಿಂಗಳಿಗೆ 45,180 ಮತ್ತು ತುಟ್ಟಿ ಭತ್ಯೆಯನ್ನು ಒಳಗೊಂಡಿದೆ. ಆಯೊಗದ ಶಿಫಾರಸಿನ ಅನ್ವಯ 2017ರ ಜುಲೈ 1ರಿಂದ ವೇತನ ಮತ್ತು ಪಿಂಚಣಿ ಪರಿಷ್ಕರಣೆಯನ್ನು ಜಾರಿಗೆ ತರಬೇಕಿದೆ. ಈ ವರ್ಷದ ಏ.1ರಿಂದ ಆರ್ಥಿಕ ಸೌಲಭ್ಯವನ್ನು ಪಾವತಿಸಬೇಕಿದೆ.ಶೇ.೩೦ರಷ್ಟು ಮೂಲ ವೇತನ ಶೇ.45.25ರಷ್ಟು ತುಟ್ಟಿಭತ್ಯೆ ವಿಲೀನಗೊಳಿಸಿ ನೌಕರರ ವೇತನ ಪರಿಷ್ಕರಣೆ ಮಾಡುವುದರಿಂದ ಒಟ್ಟು ಶೇ.75.25ರಷ್ಟು ವೇತನ ಏರಿಕೆಯಾಗುವ ಸಾಧ್ಯತೆ ಇದೆ.

ಜತೆಗೆ ಮೂಲ ವೇತನವು ಮನೆ ಬಾಡಿಗೆ ಭತ್ಯೆ. ಇತರೆ ಸೌಲಭ್ಯಗಳಿಗೆ ಹಾಗೂ ತುಟ್ಟಿಭತ್ಯೆಯ ಕಂತುಗಳಿಗೆ ಅನ್ವಯವಾಗುತ್ತವೆ ಎಂದು ಶಿಫಾರಸು ಮಾಡಲಾಗಿದೆ.  ಪಿಂಚಣಿ ಮತ್ತು ಕುಟುಂಬ ಪಿಂಚಣಿಯು ಶೇ.30ರಷ್ಟು ಪರಿಷ್ಕರಣೆಗೊಂಡು ಕಳೆದ ವರ್ಷಕ್ಕೆ ಜುಲೈ 1ರಂದು ಪಡೆಯುತ್ತಿದ್ದ ತುಟ್ಟಿಭತ್ಯೆಯಲ್ಲಿ ಶೇ.45.2ರಷ್ಟು ಏರಿಕೆಯಾಗಲಿದೆ.

ನಿವೃತ್ತಿ ವಯಸ್ಸಿನಲ್ಲಿ ಏರಿಕೆ ಇಲ್ಲ:
ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60ವರ್ಷಕ್ಕೆ ಮುಂದುವರೆಸಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಸ್ವ ಇಚ್ಛಾ ನಿವೃತ್ತಿಗೆ ಅವಶ್ಯವಿರುವ ಕನಿಷ್ಠ ಸೇವಾ ಅವಧಿಯನ್ನು 15 ವರ್ಷಗಳ ಬದಲಾಗಿ 10 ವರ್ಷಗಳಿಗೆ ಇಳಿಸಲು ಪೂರ್ಣ ಪ್ರಮಾಣದ ಪಿಂಚಣಿ ಪಡೆಯಲು ಈಗಿರುವ 33 ವರ್ಷಗಳ ಸೇವಾ ಅರ್ಹತೆಯನ್ನು 30 ವರ್ಷಗಳಿಗೆ ಇಳಿಸಲು ಶಿಫಾರಸು ಮಾಡಲಾಗಿದೆ. ಮನೆ ಬಾಡಿಗೆ ಭತ್ಯೆಯ ದರಗಳನ್ನು ಮೂಲವೇತನದ ಪ್ರಸ್ತುತ ದರಗಳಾದ ಶೇ.30, 20, 10ರ ಬದಲಾಗಿ ಪರಿಷ್ಕøತ ವೇತನದಲ್ಲಿ ಶೇ.24, 16, 08ರವರೆಗೆ ಪರಿಷ್ಕರಿಸಲು ಶಿಫಾರಸು ಮಾಡಲಾಗಿದ್ದು, ಮೂಲ ಪರಿಷ್ಕøತ ವೇತನದ ಆಧಾರದ ಮೇಲೆ ಮನೆ ಬಾಡಿಗೆ ಲೆಕ್ಕ ಹಾಕುವುದರಿಂದ ಶೇ.40ರಷ್ಟು ಹೆಚ್ಚಿಸಲಾಗುತ್ತಿದೆ ಎಂದು ಹೇಳಲಾಗಿದೆ. ಮರಣ ಮತ್ತು ನಿವೃತ್ತಿ ಉಪದಾನದ ಗರಿಷ್ಠ ಮಿತಿಯನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ ಮತ್ತು ವಂತಿಕೆ ರೂಪದ ನೂತನ ಪಿಂಚಣಿ ಯೋಜನೆಯಡಿ ನೌಕರರಿಗೂ ಉಪದಾನವನ್ನು ಪಾವತಿಸಲು ಹಾಗೂ ಮೃತ ನೌಕರರ ಅವಲಂಬಿತರಿಗೂ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ.

ಪಿಂಚಣಿಯ ಅರ್ಹತೆ:
80 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ಸಂದಾಯ ಸೌಲಭ್ಯವನ್ನು ಆಯೋಗ ಪ್ರಸ್ತಾಪಸಿದ್ದು, 80ರಿಂದ 85 ವರ್ಷದ ಪಿಂಚಣಿದಾರರಿಗೆ ಶೇ.20ರಷ್ಟು, 85ರಿಂದ 90ವರ್ಷದವರಿಗೆ ಶೇ.30ರಷ್ಟು, 95 ವರ್ಷದೊಳಗಿನವರಿಗೆ ಶೇ.40ರಷ್ಟು 95ರಿಂದ 100ವರ್ಷದೊಳಗಿನವರಿಗೆ ಶೇ.50ರಷ್ಟು 100 ವರ್ಷ ಮೇಲ್ಪಟ್ಟವರಿಗೆ ಶೇ.100ರಷ್ಟು ಹೆಚ್ಚುವರಿ ಪಿಂಚಣಿಯನ್ನು ನೀಡಲು ಶಿಫಾರಸು ಮಾಡಲಾಗಿದೆ. ಪಿಂಚಣಿದಾರರು ಮತ್ತು ಕುಟುಂಬದ ಪಿಂಚಣಿದಾರರಿಗೂ ಜ್ಯೋತಿ ಸಂಜೀವಿನಿ ಯೋಜನೆಯನ್ನು ವಿಸ್ತರಿಸುವಂತೆ ಶಿಫಾರಸು ಮಾಡಲಾಗಿದ್ದು, ಇದರ ವಾರ್ಷಿಕ ವೆಚ್ಚವನ್ನು 500ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ.

ನಗರ ಪರಿಹಾರ ಭತ್ಯೆ, ಪ್ರಯಾಣ ಭತ್ಯೆ, ಸಮವಸ್ತ್ರ ಭತ್ಯೆ ಮತ್ತು ವಿಶೇಷ ಭತ್ಯೆಗಳ ದರಗಳಲ್ಲಿ ಸಾಕಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಲಾಗಿದೆ. ವಿಕಲಚೇತನ ನೌಕರರು ಯಾಂತ್ರಿಕೃತ ಮತ್ತು ಮೋಟಾರು ಚಾಲಿತ ವಾಹನ ಖರೀದಿಸಲು ಪ್ರಸ್ತುತ ಇರುವ ಸಹಾಯ ಧನವನ್ನು 25ಸಾವಿರದಿಂದ 45ಸಾವಿರ ರೂ.ಗೆ ಹೆಚ್ಚಿಸಬೇಕು. ನೌಕರರ ವಿಕಲಚೇತನ ಮಕ್ಕಳಿಗೆ ಪ್ರತಿ ತಿಂಗಳು ನೀಡುತ್ತಿರುವ 500ರೂ.ಗಳ ಶೈಕ್ಷಣಿಕ ಭತ್ಯೆಯನ್ನು ದ್ವಿಗುಣಗೊಳಿಸಿ 1000ರೂ.ಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.

ರಾಜ್ಯ ಸರ್ಕಾರಕ್ಕೆ ಮಂಜೂರಾಗಿರುವ 7.73 ಲಕ್ಷ ಹುದ್ದೆಗಳ ಪೈಕಿ 5.20ಲಕ್ಷ ನೌಕರರು ಮಾತ್ರ ಕೆಲಸ ಮಾಡುತ್ತಿದ್ದು, ಶೇ.33ರಷ್ಟು ಹುದ್ದೆಗಳು ಖಾಲಿ ಇವೆ. ಹೊಸ ತಂತ್ರಜ್ಞಾನ ಮತ್ತು ಪ್ರಕ್ರಿಯೆಗಳನ್ನು ಕೆಲಸದಲ್ಲಿ ಅಳವಡಿಸಿಕೊಳ್ಳುವುದನ್ನು ಗಮನದಲ್ಲಿಸಿರಿಸಿಕೊಂಡು ಎಲ್ಲಾ ಇಲಾಖೆಗಳ ಸಿಬ್ಬಂದಿಗಳ ಅವಶ್ಯಕತೆಯನ್ನು ಪುನರ್ ಪರಿಶೀಲಿಸಬೇಕು. ನಂತರ ಹೊಸ ಸಿಬ್ಬಂದಿ ಮಾದರಿಯನ್ನು ರೂಪಿಸಿ ವಾಸ್ತವ ಸಿಬ್ಬಂದಿಗಳ ಸಂಖ್ಯೆಯನ್ನು ನಿರ್ಧರಿಸಬೇಕೆಂದು ಆಯೋಗ ಸಲಹೆ ನೀಡಿದೆ. ಆರನೇ ವೇತನ ಆಯೋಗದ ಶಿಫಾರಸುಗಳು ಅಖಿಲ ಭಾರತ ಸೇವೆಯ ಅಧಿಕಾರಿಗಳು, ಸಕ್ರಿಯ ನ್ಯಾಯಾಂಗ ವೇತನ ಆಯೋಗದ ವ್ಯಾಪ್ತಿಗೆ ಒಳಪಡುವ ನ್ಯಾಯಾಂಗದ ಅಧಿಕಾರಿಗಳು, ಯುಜಿಸಿ/ಎಐಸಿಟಿಇ ವೇತನ ಪಡೆಯುತ್ತಿರುವ ಬೋಧಕ ಸಿಬ್ಬಂದಿಯ ವೇತನ ಪರಿಷ್ಕರಣೆ ಅನ್ವಯಿಸುವುದಿಲ್ಲ. ಆದರೆ, ರಾಜ್ಯ ಸರ್ಕಾರದ ಭತ್ಯೆಗಳ ದರಗಳು ಇವರಿಗೆ ಅನ್ವಯವಾಗುತ್ತವೆ ಎಂದು ಹೇಳಲಾಗಿದೆ.

ಆಯೋಗವು ಇಂದು ಸಲ್ಲಿಸಿರುವ ಮೊದಲ ಸಂಪುಟದ ವರದಿಯಲ್ಲಿ ವೇತನ, ಬಡ್ತಿಗಳು ಮತ್ತು ಪಿಂಚಣಿ ಪರಿಷ್ಕರಣೆ ಕುರಿತು ಮಾತ್ರ ಶಿಫಾರಸುಗಳನ್ನು ಮಾಡಲಾಗಿದೆ.   ಮುಖ್ಯಮಂತ್ರಿ ಸಿದ್ದರಾಮಯ್ಯ, ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀಮಿವಾಸಮೂರ್ತಿ ಅವರಿಂದ ವರದಿ ಸ್ವೀರಕರಿಸಿದ ಸಿದ್ದರಾಮಯ್ಯ ಮತ್ತೊಂದು ಪ್ರತಿಯನ್ನು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯವರಿಗೂ ಕೊಡಿಸಿದರು.  ಆಯೋಗದ ಸದಸ್ಯರಾದ ಮೊಹಮ್ಮದ್ ಸನಾವುಲ್ಲ, ಆರ್.ಎಸ್. ಫೋನ್‍ದೆನ್, ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಎ.ಅತಿಕ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

Sri Raghav

Admin