6 ತಿಂಗಳೊಳಗೆ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಟೆಲಿ ಮೆಡಿಸನ್ ಸೌಲಭ್ಯ

Ramesh-Kumar--01

ಬೆಂಗಳೂರು,ಮಾ.10-ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮುಂದಿನ ಆರು ತಿಂಗಳಲ್ಲಿ ಟೆಲಿ ಮೆಡಿಸನ್ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ಇಂದಿಲ್ಲಿ ತಿಳಿಸಿದರು. ವಿಧಾನಸೌಧದಲ್ಲಿ ನಡೆದ ಇ-ಆರೋಗ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದರಿಂದ ನುರಿತ, ಪರಿಣಿತ ಹಾಗೂ ಉನ್ನತ ಶ್ರೇಣಿಯ ವೈದ್ಯರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರುವ ರೋಗಿಗಳಿಗೆ ಸೂಕ್ತ ಸಲಹೆ ದೊರೆಯಲು ಸಹಾಯವಾಗಲಿದೆ ಎಂದರು.   ಪ್ರತಿ 15 ಕಿ.ಮೀಗೆ ಒಂದು ಸುಸಜ್ಜಿತ ಆಂಬುಲೆನ್ಸ್ ಸೇವೆ ಒದಗಿಸಲಾಗುವುದು ಜೊತೆಗೆ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ ಸೌಲಭ್ಯ(ಐಸಿಯು) ಕಲ್ಪಿಸಲಾಗುವುದು ಎಂದು ಹೇಳಿದರು.

ಆಂಬುಲೆನ್ಸ್‍ಗಳಲ್ಲಿ ಕೃತಕ ಉಸಿರಾಟದ ಉಪಕರಣ ಬಳಕೆ ತರಬೇತಿ ಪಡೆದ ನರ್ಸ್, ಸಿಬ್ಬಂದಿ ಇರಲಿದ್ದು ತುರ್ತು ಸಂದರ್ಭದಲ್ಲಿ ರೋಗಿ ಹಾಗೂ ಸಾರ್ವಜನಿಕರ ಜೀವ ರಕ್ಷಣೆಗೆ ಶ್ರಮಿಸಲಿದ್ದಾರೆ ಎಂದರು.   ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕ ವ್ಯವಸ್ಥೆ ಮಾಡಿ, ಕೃತಕ ಉಸಿರಾಟ ಸೇರಿದಂತೆ ಅಗತ್ಯ ಸೌಲಭ್ಯ ನೀಡಲಾಗುವುದು. ದುಬಾರಿ ವೆಚ್ಚದ ಖಾಸಗಿ ಆಸ್ಪತ್ರೆಗಳನ್ನು ದೂಷಿಸುವ ಬದಲು ಅಂತಹ ಆಸ್ಪತ್ರೆಗೆ ಹೋಗಲಾಗದ ಬಡರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತ ಹಾಗೂ ಸೂಕ್ತ ಸೇವೆ ದೊರೆಯುತ್ತದೆ ಎಂಬುದನ್ನು ಸಾಬೀತು ಮಾಡಬೇಕಿದೆ ಎಂದು ಹೇಳಿದರು.

Ramesh-Kumar--02

ಈ ನಿಟ್ಟಿನಲ್ಲಿ ನಾವು ಸೂಕ್ತ ಕೆಲಸ ಮಾಡಬೇಕು. ಇದರಲ್ಲಿ ವೈದ್ಯಕೀಯ ಸಿಬ್ಬಂದಿ, ಅರೆವೈದ್ಯಕೀಯ ಸಿಬ್ಬಂದಿ ಪಾತ್ರವೂ ಮುಖ್ಯ. ಕಾರ್ಪೊರೇಟ್  ಸಂಸ್ಥೆಗಳಲ್ಲಿ ಸಾಮಾಜಿಕ ಜವಾಬ್ದಾರಿಯಡಿ ದೊರೆಯುವ ಸೌಲಭ್ಯ ಪಡೆದು ಸಾರ್ವಜನಿಕ ಸೇವೆ ಮಾಡಬೇಕೆಂದರು.   ರಾಜ್ಯದಲ್ಲಿ 2300ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಸ್ಯಾಮ್‍ಸಂಗ್ ಕಂಪನಿ ಒಂದು ಸಾವಿರ ಆರೋಗ್ಯ ಕೇಂದ್ರಗಳಿಗೆ ಉಚಿತ ಟ್ಯಾಬ್‍ಗಳನ್ನು ನೀಡಿದೆ. ಉಳಿದ ಆಸ್ಪತ್ರೆಗಳಿಗೂ ಟ್ಯಾಬ್‍ಗಳನ್ನು ನೀಡಬೇಕೆಂದು ಮನವಿ ಮಾಡಿದರು.   ಸ್ಯಾಮ್‍ಸಂಗ್ ಕಂಪನಿಯೊಂದಿಗೆ ಸರ್ಕಾರ ಮಾಡಿಕೊಂಡಿರುವ ಒಪ್ಪಂದ ದಿಂದ ಉಚಿತ ಆರೋಗ್ಯ ಸೇವೆ ದೊರೆಯುವಂತಾಗಿದೆ ಎಂದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮ್ಯಾನೇಜ್‍ಮೆಂಟ್ ಇಂಪ್ರೂವಿಂಗ್ ಸಿಸ್ಟಮ್ ಅಳವಡಿಕೆಯಿಂದ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಸಚಿವ ಆರ್.ರೋಷನ್ ಬೇಗ್, ಮೇಯರ್ ಜಿ.ಪದ್ಮಾವತಿ, ಕೋಡೆ ಕನ್ಸಲ್ಟಿಂಗ್ ಉಪಾಧ್ಯಕ್ಷ ಆರ್.ರಾಮಶೇಷನ್ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಇಲಾಖೆಯ ಆಯುಕ್ತ ಸುಬೋಧ್ ಯಾದವ್, ಸ್ಯಾಮ್‍ಸಂಗ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಡಾ.ಅಲೋಕ್ ಮುಂತಾದವರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin