ಎಸ್‍ಟಿ ಸಮುದಾಯದವರ ಮೇಲೆ ಹಲ್ಲೆ ನಡೆಸಿದ್ದ 6 ಮಂದಿ ಬಂಧನ

Social Share

ಮೈಸೂರು ,ಜ. 17- ಪಾನಿಪುರಿ ತಿನ್ನಲು ತಮ್ಮ ಕೇರಿಗೆ ಬಂದರೆಂಬ ಕಾರಣಕ್ಕಾಗಿ ಪರಿಶಿಷ್ಟರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಜಯಪುರ ಠಾಣೆ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ. ಗ್ರಾಮದ ಮೂರ್ತಿ, ಸಚ್ಚಿನ್, ನವೀನ್, ಮಹದೇವಸ್ವಾಮಿ, ಚಂದನ್ ಮತ್ತು ಸಂತೋಷ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ತಾಲೂಕಿನ ಜಯಪುರ ಹೋಬಳಿಯ ಅರಸನಕೆರೆಯಲ್ಲಿ ಈ ಘಟನೆ ನಡೆದಿತ್ತು. ಈ ಸಂಬಂಧ ಜಯಪುರ ಠಾಣೆಯಲ್ಲಿ ಜಾತಿ ನಿಂದನೆ, ಅವಾಚ್ಯ ಶಬ್ದಗಳಿಂದ ನಿಂದನೆ, ಕೊಲೆ ಬೆದರಿಕೆ ಪ್ರಕರಣ ದಾಖಲಾಗಿತ್ತು.
ಘಟನೆ ವಿವರ: ದಿಲೀಪ, ಪ್ರಸನ್ನ ಮತ್ತು ಮಧುಕರ ಎಂಬವರು ಪಾನಿಪುರಿ ತಿನ್ನಲೆಂದು ಗುರುವಾರ ರಾತ್ರಿ 7.30ಕ್ಕೆ ಕೇರಿಗೆ ತೆರಳಿದ್ದರು. ಅದನ್ನು ಆಕ್ಷೇಪಿಸಿದ್ದ ಮೂರ್ತಿ, ಸಚ್ಚಿನ್ ಹಲ್ಲೆ ನಡೆಸಿದ್ದರು. ಈ ಸಂಬಂಧ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಸಂಧಾನ ನಡೆದಿತ್ತು. ಶುಕ್ರವಾರ ಬೆಳಿಗ್ಗೆ ಮತ್ತೆ ಆರೋಪಿಗಳಾದ ಮೂರ್ತಿ, ಸಚ್ಚಿನ್ ಅವರು ದಿಲೀಪ, ಪ್ರಸನ್ನ ಮತ್ತು ಮಧುಕರ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದರು. ಅಲ್ಲದೆ ತಡೆಯಲು ಬಂದ ಸೌಭಾಗ್ಯ ಮತ್ತು ಚಂದನ ಅವರ ಮೇಲೂ ಹಲ್ಲೆ ನಡೆಸಿದ್ದರು.
ಈ ಘಟನೆ ಸಂಬಂಧ ಹಲ್ಲೆಗೊಳಗಾದವರು ನೀಡಿದ ದೂರಿನ ಮೇರೆಗೆ 6 ಮಂದಿಯನ್ನು ಬಂಧಿಸಲಾಗಿದೆ. ಹಲ್ಲೆಗೊಳಗಾದ ಅರಸನಕೆರೆ ಗ್ರಾಮದ ಸೌಭಾಗ್ಯ, ದಿಲೀಪ, ಚಂದನ, ಮಧುಕರ, ಪ್ರಸನ್ನ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Articles You Might Like

Share This Article