ಉಪಚುನಾವಣೆಯಿಂದ ದೂರ ಉಳಿಯುವರೇ ಸಿಡಿ ಭಯದಲ್ಲಿರುವ 6 ಸಚಿವರು..?

ಬೆಂಗಳೂರು,ಮಾ.29- ನ್ಯಾಯಾಲಯದಿಂದ ತಡೆ ತಂದು ಸರ್ಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿದ ಕಾರಣ ಉಪಚುನಾವಣೆಯಲ್ಲಿ ಆರು ಸಚಿವರು ಪ್ರಚಾರದಿಂದ ದೂರ ಉಳಿಯುವ ಸಾಧ್ಯತೆ ಇದೆ. ಈ ಸಚಿವರು ಪ್ರಚಾರಕ್ಕೆ ಬಂದರೆ ಪ್ರತಿಪಕ್ಷಗಳು ಇದನ್ನೇ ಅಸ್ತ್ರ ಮಾಡಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಬಹುದೆಂಬ ಭೀತಿಯಿಂದಾಗಿ ಸದ್ಯಕ್ಕೆ ದೂರ ಉಳಿಯುವಂತೆ ಪಕ್ಷ ಸೂಚಿಸಿದೆ ಎನ್ನಲಾಗುತ್ತಿದೆ.

ಸಚಿವರಾದ ಬಿ.ಸಿ.ಪಾಟೀಲ್, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಭೈರತಿ ಬಸವರಾಜ್ ಸೇರಿದಂತೆ ಒಟ್ಟು 6 ಸಚಿವರು ಪ್ರಚಾರದಿಂದ ದೂರ ಉಳಿಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಈ ಆರು ಮಂದಿ ಸಚಿವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಕಳೆದ ಅವೇಶನದಲ್ಲಿ ಸರ್ಕಾರಕ್ಕೆ ಭಾರೀ ಮುಜುಗರ ಸೃಷ್ಟಿಯಾಗಿತ್ತು. ಸಚಿವರು ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಪಟ್ಟು ಹಿಡಿದು ಕಲಾಪದಲ್ಲಿ ಗದ್ದಲ ಎಬ್ಬಿಸಿತ್ತು.

( ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾದ ರಮೇಶ್ ಜಾರಕಿಹೊಳಿ )

ತಾವು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದನ್ನು ಸಚಿವರು ಸಮರ್ಥಿಸಿಕೊಂಡಿದ್ದರಾದರೂ ಕಾಂಗ್ರೆಸ್ ರಾಜೀನಾಮೆಗೆ ಒತ್ತಾಯಿಸಿದ್ದರಿಂದ ಆಡಳಿತಾರೂಢ ಬಿಜೆಪಿಗೆ ಭಾರೀ ಮುಜುಗರ ಎದುರಾಗಿತ್ತು.ಈ ಎಲ್ಲಾ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿರುವ ಬಿಜೆಪಿ ಉಪಚುನಾವಣೆಯಲ್ಲಿ ಪ್ರಚಾರದಿಂದ ದೂರ ಉಳಿಯುವಂತೆ ಮೌಖಿಕ ಸೂಚನೆ ಕೊಟ್ಟಿದೆ ಎನ್ನಲಾಗುತ್ತಿದೆ.

ಬಿಜೆಪಿ ರಾಜ್ಯದ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇದರ ನಡುವೆಯೇ 6 ಮಂದಿ ಸಚಿವರಿಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದಂತೆ ಸಿಎಂ ಕೂಡ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಿ.ಡಿ ಪ್ರಕರಣದ ಬೆನ್ನಲ್ಲೇ ಕೋರ್ಟ್‍ಗೆ ತೆರಳಿ ತಡೆಯಾಜ್ಞೆ ತಂದಿದ್ದ ಸಚಿವರಿಗೆ ಉಪ-ಚುನಾವಣೆಯ ಪ್ರಚಾರದಲ್ಲಿ ನಾನು ನಿಮಗೆಲ್ಲಾ ತಿಳಿಸುವವರೆಗೂ ಯಾರೂ ಪ್ರಚಾರಕ್ಕೆ ಹೋಗಬಾರದು. ಸುಖಾಸುಮ್ಮನೆ ಪ್ರಚಾರದ ಆಖಾಡಕ್ಕಿಳಿದು ಸರ್ಕಾರಕ್ಕೆ ಮುಜುಗರ ತರಬಾರದು. ನಿಮ್ಮಿಂದ ಯಾರು ಕೂಡ ತಲೆ ತಗ್ಗಿಸುವಂತಹ ಕೆಲಸ ಆಗಬಾರದು ಎಂದು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ರಮೇಶ್ ಜಾರಕಿಹೊಳಿ ಪ್ರಕರಣದಿಂದಲೇ ಹೊರಬರಲಾಗದೇ ಸಂಕಷ್ಟ ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಾರದೇ ಉಪ-ಚುನಾವಣೆಯ ಆಖಾಡಕ್ಕೆ ಹೋಗಬೇಡಿ. ಜೊತೆಗೆ ನಿಮ್ಮ ವ್ಯಾಪ್ತಿ ಬಿಟ್ಟು ಯಾವುದೇ ಕೆಲಸವನ್ನು ಮಾಡಬೇಡಿ ಎಂದು ಸಹ ಬಿಎಸ್‍ವೈ ಈ ಆರು ಸಚಿವರಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

Sri Raghav

Admin