ಮಹಾರಾಷ್ಟ್ರದ ನಾಸಿಕ್ ಬಳಿ ಭೀಕರ ಅಪಘಾತ, 10 ಮಂದಿ ಸಾವು

Social Share

ಮುಂಬೈ,ಜ.13- ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ವೇಗವಾಗಿ ಬಂದ ಬಸ್ಸೊಂದು ಟ್ರಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಹತ್ತು ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ.

ಖಾಸಗಿ ಐಷಾರಾಮಿ ಬಸ್ ಥಾಣೆ ಜಿಲ್ಲೆಯ ಅಂಬರನಾಥ್ ಮೂಲದ ಕಂಪನಿಯೊಂದರ ಉದ್ಯೋಗಿಗಳನ್ನು ಹೊತ್ತು ಅಹ್ಮದ್‍ನಗರ ಜಿಲ್ಲೆಯ ಶಿರಡಿಗೆ ತೆರಳುತ್ತಿತ್ತು. ಬಸ್ಸಿನಲ್ಲಿ ಒಟ್ಟು 45 ಮಂದಿ ಪ್ರಯಾಣಿಕರಿದ್ದರು. ಮುಂಬೈನಿಂದ ಸುಮಾರು 180 ಕಿಮೀ ದೂರದಲ್ಲಿರುವ ನಾಸಿಕ್‍ನ ಸಿನ್ನಾರ್ ತಹಸಿಲ್‍ನ ಪಥರೆ ಶಿವರ್ ಬಳಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರಲ್ಲಿ ಏಳು ಮಹಿಳೆಯರು, ಇಬ್ಬರು ಪುಟ್ಟ ಬಾಲಕರು ಹಾಗೂ ಓರ್ವ ಪುರುಷ ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಜೀವಹಾನಿಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಸಂಬಂಧಿಕರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಯಿಂದ 2 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ. ಗಾಯಾಳುಗಳಿಗೆ ತಲಾ 50,000 ರೂಪಾಯಿ ನೀಡಲಾಗುವುದು ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.

ಅಣ್ಣಾಮಲೈಗೆ ಝಡ್ ಕ್ಯಾಟಗರಿ ಭದ್ರತೆ

ಘಟನೆಯ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಟ್ವೀಟ್‍ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಅವರ ಕಚೇರಿಯ ಪ್ರಕಟಣೆ ತಿಳಿಸಿದೆ. ಅಪಘಾತಕ್ಕೆ ಕಾರಣ ಕುರಿತು ತನಿಖೆಗೆ ಆದೇಶಿಸಿದ್ದು, ಜೊತೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಧನಸಹಾಯವನ್ನು ಘೋಷಿಸಿದ್ದಾರೆ.

ನಾಸಿಕ್ ವಿಭಾಗೀಯ ಆಯುಕ್ತರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ, ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ನಾಸಿಕ್ ಮತ್ತು ಶಿರಡಿಗೆ ಸ್ಥಳಾಂತರಿಸಲು ಆದೇಶಿಸಿದ್ದಾರೆ.

ವಿಧಾನಸೌಧ ಎದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಗಾಯಾಳುಗಳನ್ನು ಸಿನ್ನಾರ್ ಗ್ರಾಮಾಂತರ ಆಸ್ಪತ್ರೆ ಮತ್ತು ಸಿನ್ನಾರ್‍ನಲ್ಲಿರುವ ಯಶವಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಹತ್ತು ಮಂದಿಯಲ್ಲಿ ಆರು ಮಂದಿಯನ್ನು ಗುರುತಿಸಲಾಗಿದೆ ಎಂದು ನಾಸಿಕ್ ಜಿಲ್ಲಾಧಿಕಾರಿ ಡಿ.ಗಂಗಾಧರನ್ ತಿಳಿಸಿದ್ದಾರೆ.

Articles You Might Like

Share This Article