ಬೆಂಗಳೂರು,ಸೆ.13- ರಾಜ್ಯದಲ್ಲಿ ಸುರಿದ ಮಳೆಯಿಂದ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದ್ದು ತತ್ಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳಲು 600 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಮಹದೇವ.ಕೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ನಿರೀಕ್ಷೆಗೂ ಮೀರಿದ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಯಿಂದ 300 ಕೋಟಿ, ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಿಂದ 300 ಕೋಟಿ ಸೇರಿ ಒಟ್ಟು 600 ಕೋಟಿ ರೂ.ಗಳನ್ನು ತತ್ಕ್ಷಣವೇ ಪರಿಹಾರ ಕೈಗೊಳ್ಳಲು ಬಿಡುಗಡೆ ಮಾಡಲಾಗಿದೆ.
ಇಂಧನ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಕಂದಾಯ ಸೇರಿದಂತೆ ಹಲವಾರು ಇಲಾಖೆಗಳಿಗೆ ಸೇರಿದ ಮೂಲಭೂತ ಸೌಕರ್ಯಗಳು ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಅಧಿಕಾರಿಗಳಿಗೆ ಎರಡು ಹಂತದಲ್ಲಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ.
ಮೊದಲು ತತ್ಕ್ಷಣವೇ ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಕಡೆ ಪರಿಹಾರ ಕೈಗೊಳ್ಳಲು ಜಿಲ್ಲಾಕಾರಿಗಳಿಗೆ ಸೂಚಿಸಲಾಗಿದೆ. 2ನೇ ಹಂತದಲ್ಲಿ ವಿಸ್ತೃತವಾದ ಚರ್ಚೆ ನಡೆಸಬೇಕೆಂದು ಸೂಚಿಸಲಾಗಿದೆ. ಈ ವರದಿ ಬಂದ ನಂತರ ಪರಿಹಾರವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಎನ್ಡಿಆರ್ಎಫ್ ನಿಯಮಗಳ ಪ್ರಕಾರ ಪರಿಹಾರವನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಸಿಎಂ ತಿಳಿಸಿದರು.