ಬೆಂಗಳೂರು,ಆ.17- ಉತ್ತರ ವಿಭಾಗದ ಪೊಲೀಸರು ಮಾದಕವಸ್ತು, ರಕ್ತ ಚಂದನ, ಸುಲಿಗೆ, ಸರಗಳ್ಳತನ, ಮೊಬೈಲ್ ಸುಲಿಗೆ, ಮನೆ ಕಳವು, ಸೇವಕರಿಂದ, ವಾಹನ ಕಳವು ಪ್ರಕರಣ ಗಳಲ್ಲಿ ಭಾಗಿಯಾಗಿದ್ದ 61 ಮಂದಿ ಆರೋಪಿ ಗಳನ್ನು ಬಂಧಿಸಿ 89 ಪ್ರಕರಣಗಳನ್ನು ಪತ್ತೆ ಹಚ್ಚಿ, ಸುಮಾರು 2.40 ಕೋಟಿ ರೂ. ಬೆಲೆ ಬಾಳುವ ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
92 ಲಕ್ಷ ರೂ. ಮೌಲ್ಯದ ಮಾದಕವಸ್ತು ಚರ್ರಸ್ 1.9 ಕೆಜಿ, ಎಂಡಿಎಂಎ 662 ಗ್ರಾಂ, ಗಾಂಜಾ 27.960 ಕೆಜಿ ವಶಪಡಿಸಿಕೊಳ್ಳಲಾಗಿದೆ. 35 ಲಕ್ಷ ರೂ. ಮೌಲ್ಯದ 722 ಕೆಜಿ ರಕ್ತಚಂದನ, 31.91 ಲಕ್ಷ ರೂ. ಮೌಲ್ಯದ 748 ಗ್ರಾಂ ತೂಕದ ಚಿನ್ನಾಭರಣ, 2.53 ಲಕ್ಷ ರೂ ಮೌಲ್ಯದ 4.2 ಕೆಜಿ ಬೆಳ್ಳಿ ವಸ್ತುಗಳು,
24.36 ಲಕ್ಷ ರೂ. ಮೌಲ್ಯದ 51 ದ್ವಿಚಕ್ರ ವಾಹನ, 6.20 ಲಕ್ಷ ರೂ. ಮೌಲ್ಯದ 7 ತ್ರಿಚಕ್ರ ವಾಹನ, 3.4 ಲಕ್ಷ ನಗದು, 1.50 ಲಕ್ಷ ರೂ. ಮೌಲ್ಯದ 7 ಮೊಬೈಲ್‍ಫೋನ್ ಮತ್ತು 1 ನಾಡಪಿಸ್ತೂಲ್ ಹಾಗೂ 11 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆಬ್ಬಾಳ ಪೊಲೀಸ್ ಠಾಣೆ: ಎನ್.ಡಿ.ಪಿ.ಎಸ್ ಪ್ರಕರಣದಲ್ಲಿ ಆರೋಪಿಯು ಮಾದಕ ವಸ್ತುವನ್ನು ಮಾರಾಟ ಮಾಡಲು ಬಂದಿರುವ ಮಾಹಿತಿ ಮೇರೆಗೆ ದಾಳಿ ಮಾಡಿ, ಒಬ್ಬ ಆರೋಪಿಯನ್ನು ಬಂಧಿಸಿ, 1.9 ಕೆ.ಜಿ. ಚರಸ್ ಹಾಗೂ 5.1 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ರಾಜಾಜಿನಗರಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆಯೊಬ್ಬ ಮಾದಕ ವಸ್ತುವನ್ನು ಮಾರಾಟ ಮಾಡಲು ಬಂದಿರುವ ಮಾಹಿತಿ ಮೇರೆಗೆ ದಾಳಿ ಮಾಡಿ, 648 ಗ್ರಾಂ ಎಂ.ಡಿ.ಎಂ.ಎ ಅನ್ನು ರಾಜಾಜಿನಗರ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.
ಹೆಬ್ಬಾಳ ಮತ್ತು ಆರ್.ಟಿ.ನಗರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಒಬೊಬ್ಬ ಆರೋಪಿಯನ್ನು ಬಂಧಿಸಿ ಕ್ರಮವಾಗಿ 8 ಗ್ರಾಂ ಮತ್ತು 6 ಗ್ರಾಂ ಎಂ.ಡಿ.ಎಂ.ಎ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದರಂತೆ 3 ಪ್ರಕರಣಗಳಲ್ಲಿ 3 ಜನ ಆರೋಪಿಗಳನ್ನು ಬಂಧಿಸಿ ಒಟ್ಟು 662 ಗ್ರಾಂ ಎಂ.ಡಿ.ಎಂ.ಎ ಅನ್ನು ವಶಪಡಿಸಿಕೊಳ್ಳಲಾಗಿದೆ.
ಉತ್ತರ ವಿಭಾಗದ 7 ಪೊಲೀಸ್ ಠಾಣೆಗಳಲ್ಲಿ 13 ಆರೋಪಿಗಳನ್ನು ಬಂಧಿಸಿ, 22.86 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಆರ್.ಟಿ.ನಗರ-7 ಕೆ.ಜಿ, ನಂದಿನಿಲೇಔಟ್-6.598 ಕೆ.ಜಿ, ವಶಪಡಿಸಿಕೊಳ್ಳಲಾಗಿದೆ.
ರಕ್ತಚಂದನ ಮಾರಾಟ ಪ್ರಕರಣಗಳು:
ಆರ್.ಟಿ.ನಗರ ಪೊಲೀಸ್ ಠಾಣೆ ಪೊಲೀಸರು ರಕ್ತಚಂದನ ಪ್ರಕರಣದಲ್ಲಿ ಆರೋಪಿಯು ಆಂಧ್ರಪ್ರದೇಶ ರಾಜ್ಯದಿಂದ ರಕ್ತಚಂದನವನ್ನು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ದಾಳಿ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸಿ ಸುಮಾರು 35 ಲಕ್ಷ ರೂ. ಬೆಲೆ ಬಾಳುವ 722.4 ಕೆ.ಜಿ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಸುಲಿಗೆ ಪ್ರಕರಣಗಳು:
ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ಬಾಡಿಗೆ ಮನೆ ಕೇಳಿಕೊಂಡು ಬಂದು ಮಾಲೀಕರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನಾಭರಣ ಮತ್ತು ಬೆಳ್ಳಿ ಸಾಮಾನುಗಳನ್ನು ಸುಲಿಗೆ ಮಾಡಿದ್ದರು. ಈ ಪ್ರಕರಣದಲ್ಲಿ 4 ಆರೋಪಿಗಳನ್ನು ಬಂಧಿಸಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 70 ಗ್ರಾಂ ಚಿನ್ನಾಭರಣ, 120 ಗ್ರಾಂ ಬೆಳ್ಳಿ ಸಾಮಾನು, 4-ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂಜಯನಗರ ಪೊಲೀಸ್ ಠಾಣೆ:
ಶಸ್ತ್ರ ಕಾಯ್ದೆ ಪ್ರಕರಣದಲ್ಲಿ ಜೂ.16ರಂದು ರಾತ್ರಿ 12.45ರ ಸುಮಾರಿನಲ್ಲಿ ಹೋಟೆಲ್‍ನಲ್ಲಿ ಊಟ ಮಾಡಿಕೊಂಡು ಕಾರಿನಲ್ಲಿ ಕುಳಿತುಕೊಳ್ಳಲು ಹೋದಾಗ ಇಬ್ಬರು ದರೋಡೆಕೋರರು ಏಕಾಏಕಿ ಕಾರಿನೊಳಗೆ ಕುಳಿತುಕೊಂಡು ಪಿರ್ಯಾದಿ ಹಾಗೂ ಅವರ ಸ್ನೇಹಿತೆಗೆ ಗನ್ ತೋರಿಸಿ ಬೆದರಿಸಿ, ದೇವನಹಳ್ಳಿ ರಸ್ತೆಗೆ ಕರೆದುಕೊಂಡು ಹೋಗಿ ಅವರನ್ನು ಕಾರಿನಿಂದ ಕೆಳಗಿಳಿಸಿ ವಾಹನ ಹಾಗೂ ಅದರಲ್ಲಿದ್ದ ಲ್ಯಾಪ್‍ಟಾಪ್, ಐಪಾಡ್ ಸಮೇತ ಸುಲಿಗೆ ಮಾಡಿಕೊಂಡು ಹೋಗಿದ್ದರು. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಉತ್ತರ ಪ್ರದೇಶ ರಾಜ್ಯದಲ್ಲಿ ಪತ್ತೆ ಹಚ್ಚಿ ಬಂಸಿ, ಅವರಿಂದ ಕೃತ್ಯಕ್ಕೆ ಬಳಸಿದ್ದ ನಾಡಪಿಸ್ತೂಲ್ ಮತ್ತು 11 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗಂಗಮ್ಮಗುಡಿ ಪೊಲೀಸ್ ಠಾಣೆ: ಜು.8ರಂದು ಸಂಜೆ ಒಬ್ಬರೇ ಮನೆಯಲ್ಲಿದ್ದಾಗ ಸುಮಾರು 25 ರಿಂದ 30 ವಯಸ್ಸಿನ ಅಪರಿಚಿತ ವ್ಯಕ್ತಿ ಏಕಾಏಕಿ ಮನೆಯೊಳಗೆ ನುಗ್ಗಿ ಪಿರ್ಯಾದುದಾರರ ಕೈಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ, ಚಾಕುವಿನಿಂದ ಹಲ್ಲೆ ಮಾಡಿ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿಕೊಂಡು ಹೋಗಿದ್ದನು.
ಈ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ತಮಿಳುನಾಡು ರಾಜ್ಯದಲ್ಲಿ ಪತ್ತೆ ಮಾಡಿ ಆತನ ಮಾಹಿತಿ ಮೇರೆಗೆ 100 ಗ್ರಾಂ ಚಿನ್ನಾಭರಣ, 1.04 ಲಕ್ಷ ನಗದು ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಜೆ.ಸಿ.ನಗರ ಪೊಲೀಸ್ ಠಾಣೆ: ಜು.5ರಂದು ಸಂಜೆ 7.40ರ ಸಮಯದಲ್ಲಿ ನಾಲ್ಕು ಮಂದಿ ದರೋಡೆಕೋರರು ಪಿರ್ಯಾದಿಯ ಮನೆ ನುಗ್ಗಿ ಚಾಕು ತೋರಿಸಿ ಚಿನ್ನಾಭರಣ ಮತ್ತು ನಗದನ್ನು ಸುಲಿಗೆ ಮಾಡಿಕೊಂಡು ಹೋಗಿದ್ದರು. ಈ ಪ್ರಕರಣದಲ್ಲಿ 4 ಜನ ಆರೋಪಿಗಳನ್ನು ಬಂಧಿಸಿ, 200 ಗ್ರಾಂ ಚಿನ್ನಾಭರಣ, 2 ಲಕ್ಷ ನಗದು, 1 ಆಟೋರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.
ಸೋಲದೇವನಹಳ್ಳಿ ಪೊಲೀಸ್ ಠಾಣೆ: ಹೆಸರಘಟ್ಟದ ಆರ್.ಎಫ್.ಎಫ್ ವಸತಿ ಗೃಹದ ರಸ್ತೆಯಲ್ಲಿ ಜು.2ರಂದು ಸಂಜೆ 6.15 ಗಂಟೆಗೆ ಪಿರ್ಯಾದಿ ಅವರ ಸ್ನೇಹಿತೆಯೊಂದಿಗೆ ವಾಯುವಿಹಾರದಲ್ಲಿದ್ದಾಗ ಇಬ್ಬರು ಆರೋಪಿಗಳು ಬೈಕಿನಲ್ಲಿ ಬಂದು ಚಾಕು ತೋರಿಸಿ ಅವರ ಚಿನ್ನದ ಮಾಂಗಲ್ಯ ಸರಗಳನ್ನು ಮತ್ತು ಮೊಬೈಲ್ ಫೋನ್‍ನ್ನು ಸುಲಿಗೆ ಮಾಡಿಕೊಂಡು ಹೋಗಿದ್ದು. ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿ 30 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಆರ್.ಎಂ.ಸಿಯಾರ್ಡ್ ಪೊಲೀಸ್ ಠಾಣೆ: ಜು.29ರಂದು ರಾತ್ರಿ 8ಗಂಟೆಯಲ್ಲಿ ಪಿರ್ಯಾದಿಯು ಆರ್.ಎಂ.ಸಿ.ಯಾರ್ಡ್ ಠಾಣಾ ಸರಹದ್ದಿನಲ್ಲಿ ಕ್ಯಾಂಟರ್‍ನಲ್ಲಿ ಹೋಗುವಾಗ ಪೊಲೀಸ್ ಹೆಲ್ಮೆಟ್ ಹಾಕಿಕೊಂಡು ಬಂದ ಒಬ್ಬ ವ್ಯಕ್ತಿ ವಾಹನ ನಿಲ್ಲಿಸಲು ಸೂಚಿಸಿದಾಗ ವಾಹನ ನಿಲ್ಲಿಸಿ ಕೆಳಗೆ ಇಳಿದಾಗ ಪಿರ್ಯಾದಿಗೆ ಚಾಕು ತೋರಿಸಿ ಮೊಬೈಲ್ ಕಿತ್ತುಕೊಂಡು ಹೋಗಿದ್ದ ಪ್ರಕರಣದಲ್ಲಿ ಆರ್.ಎಂ.ಸಿ ಯಾರ್ಡ್ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಪೀಣ್ಯ ಪೊಲೀಸ್ ಠಾಣೆ: ಜು.15ರಂದು ರಾತ್ರಿ 8 ಗಂಟೆಯಲ್ಲಿ ಸೈಕಲ್‍ನಲ್ಲಿ ಹೋಗುವಾಗ ಮೂವರು ಪಿರ್ಯಾದಿಗೆ ಚಾಕುವಿನಿಂದ ಹಲ್ಲೆ ಮಾಡಿ, ಮೊಬೈಲ್‍ನ್ನು ಕಿತ್ತುಕೊಂಡು ಹೋಗಿದ್ದರು. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಮೊಬೈಲ್ ವಶಪಡಿಸಿಕೊಂಡಿರುತ್ತಾರೆ.
ಸರಗಳ್ಳತನ ಸುಲಿಗೆ ಪ್ರಕರಣಗಳು: ಮಹಾಲಕ್ಷ್ಮೀಲೇಔಟ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 29 ಗ್ರಾಂ ತೂಕದ ಚಿನ್ನದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ, 1 ದ್ವಿಚಕ್ರವಾಹನವನ್ನು ವಶಪಡಿಸಿಕೊಂಡು ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆ 2 ಸರಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.
ರಾಜಾಜಿನಗರ ಪೊಲೀಸ್ ಠಾಣೆ: ದ್ವಿಚಕ್ರವಾಹನದಲ್ಲಿ ಹೋಗುವಾಗ ಮಹಿಳೆಯ 40 ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಿ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಮನೆಕಳವು ಮತ್ತು ಸೇವಕರಿಂದ ಪ್ರಕರಣಗಳು: ಶ್ರೀರಾಮಪುರ ಪೊಲೀಸ್ ಠಾಣೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ 4.7 ಲಕ್ಷ ರೂ. ಬೆಲೆ ಬಾಳುವ 119 ಗ್ರಾಂ ಚಿನ್ನಾಭರಣ ಮತ್ತು 450 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಬ್ರಮಣ್ಯನಗರ ಪೊಲೀಸ್ ಠಾಣೆ: ಕೆಲಸ ನೀಡಿದ ಮನೆಯಲ್ಲೇ ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿದ್ದ ಕಾರು ಚಾಲಕನನ್ನು ಬಂಧಿಸಿ 3.44 ಕೆ.ಜಿ. ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆ: ಅಮೇಜಾನ್‍ನಲ್ಲಿ ಡಿಲಿವಾರಿ ಬಾಯ್ ಆಗಿ ಕೆಲಸ ಮಾಡಿಕೊಂಡು, ಮನೆಯ ಮುಂಭಾಗದ ಬಾಕ್ಸ್‍ನಲ್ಲಿ ಇಟ್ಟಿದ್ದ ಬೀಗದ ಕೀಯನ್ನು ತೆಗೆದುಕೊಂಡು ಮನೆಯಲ್ಲಿ ಕಳವು ಮಾಡಿದದ ಆರೋಪಿಯನ್ನು ಬಂಧಿಸಿ 150 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಾಹನ ಪ್ರಕರಣಗಳು:
ಉತ್ತರ ವಿಭಾಗದ 4 ಪೊಲೀಸ್ ಠಾಣೆಗಳಲ್ಲಿ ತ್ರಿಚಕ್ರವಾಹನ ಕಳವು ಪ್ರಕರಣದಲ್ಲಿ 3 ಜನ ಆರೋಪಿಗಳನ್ನು ಬಂಧಿಸಿ 7 ತ್ರಿಚಕ್ರವಾಹನಗಳನ್ನು ವಶಪಡಿಸಿಕೊಂಡು, 7 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಉತ್ತರ ವಿಭಾಗದ 11 ಪೊಲೀಸ್ ಠಾಣೆಗಳಲ್ಲಿ ದ್ವಿಚಕ್ರವಾಹನ ಕಳವು ಪ್ರಕರಣದಲ್ಲಿ 15 ಜನ ಆರೋಪಿಗಳನ್ನು ಬಂಧಿಸಿ 51 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡು, 51 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಉತ್ತರ ವಿಭಾಗದ ಡಿಸಿಪಿ ವಿನಾಯಕ ಪಾಟೀಲ್ ಅವರ ನೇತೃತ್ವದಲ್ಲಿ ಯಶವಂತಪುರ ಉಪವಿಭಾಗದ ಎಸಿಪಿ ಅರುಣ್ ನಾಗೇಗೌಡ, ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಪ್ರವೀಣ್ ಅವರ ನೇತೃತ್ವದಲ್ಲಿ ಉತ್ತರ ವಿಭಾಗದ ಎಲ್ಲಾ ಪೊಲೀಸ್ ಇನ್ಸ್‍ಪೆಕ್ಟರ್‍ಗಳು ಮಾಡಿರುವ ಈ ಪತ್ತೆ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.