ಬಡ, ಮಧ್ಯಮ ವರ್ಗಕ್ಕೆ 6500 ಹೊಸ ಶಾಲೆ ಕಟ್ಟಡಗಳ ನಿರ್ಮಾಣ : ಸಿಎಂ

ಬೆಂಗಳೂರು,ಮೇ 8- ರಾಜ್ಯದಲ್ಲಿ 6500 ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಇದೊಂದು ದಾಖಲೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮೊದಲಿಯರ್ ಸೇವಾ ಸಂಘದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದೇ ವರ್ಷದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಿ ಮೂಲ ಸೌಲಭ್ಯಕ್ಕೆ ಒತ್ತು ಕೊಟ್ಟಿರುವುದು ದಾಖಲಾಗಿದೆ.

ಹಿಂದೆ ಯಾವ ಸರ್ಕಾರವು ಇಷ್ಟು ದೊಡ್ಡ ಪ್ರಮಾಣದಲ್ಲಿ ಮೂಲಸೌಲಭ್ಯ ಒದಗಿಸಲು ಮುಂದಾಗಿರಲಿಲ್ಲ. ಶಿಕ್ಷಣಕ್ಕೆ ಶಕ್ತಿ ತುಂಬಲು ಇಂತಹ ಕ್ರಾಂತಿಕಾರಕ ಹೆಜ್ಜೆಯನ್ನು ಇಟ್ಟಿದೆ ಎಂದರು. ಬಡ ಮತ್ತು ಮಧ್ಯಮ ವರ್ಗದವರಿಗೆ ಶಿಕ್ಷಣ ದುಬಾರಿಯಾಗಿದ್ದು, ಅದಕ್ಕೆ ಪರಿಹಾರ ದೊರೆಯಬೇಕಾಗಿದೆ. ಕಡಿಮೆ ಸರ್ಕಾರಿ ಶಾಲೆಗಳು ಒಂದೆಡೆಯಾದರೆ, ಅತಿಹೆಚ್ಚು ಶುಲ್ಕ ವಿಧಿಸುವ ಖಾಸಗಿ ಶಾಲೆಗಳು ಮತ್ತೊಂದೆಡೆ ಇವೆ. ಎಲ್ಲಾ ಸಮುದಾಯದ ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ.

ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಸಂಘ ಸಂಸ್ಥೆಗಳು ಮುಂದೆ ಬಂದರೆ ಸರ್ಕಾರ ಸಹಕಾರ ನೀಡಲಿದೆ ಎಂದು ಹೇಳಿದರು.
ಸಮುದಾಯದ ಸಹಭಾಗಿತ್ವದಿಂದ ಸಮಾಜದಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯವಿದೆ. ಸಂಘಸಂಸ್ಥೆಗಳಿಂದ ಸ್ಥಾಪಿತವಾಗುವ ಶಿಕ್ಷಣ ಸಂಸ್ಥೆಗಳಿಂದ ಮೌಲಿಕ, ನೈತಿಕ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮನುಷ್ಯ ಇತಿಹಾಸದ ಭಾಗವಾಗಬೇಕು. ಹಾಗೆಯೇ ಹೊಸ ಇತಿಹಾಸ ಸೃಷ್ಟಿಸಬೇಕು. ಅಂತಹ ಶಕ್ತಿ ಮೊದಲಿಯಾರ್ ಸಮುದಾಯದಲ್ಲಿದೆ. ನಾಡು ಕಟ್ಟುವ ಕಾರ್ಯದಲ್ಲಿ ಈ ಸಮುದಾಯದ ಮಾರ್ಗದರ್ಶನ ಹಾಗೂ ಸೇವೆ ಅಗತ್ಯವಿದ್ದು, ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದರು.
ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ತಂದಿದ್ದು, ಅವುಗಳ ಪ್ರಯೋಜನ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.

ದಕ್ಷಿಣ ಭಾರತದ ರಾಜ್ಯಗಳಲ್ಲಿರುವ ಮೊದಲಿಯಾರ್ ಸಮುದಾಯದವರು ಕಠಿಣ ಪರಿಶ್ರಮ ಹಾಗೂ ವೈಜ್ಞಾನಿಕ ಚಿಂತನೆಯುಳ್ಳವರಾಗಿದ್ದು, ಈ ಸಮುದಾಯ ದೊಡ್ಡ ಇತಿಹಾಸ ಹೊಂದಿದೆ. ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ಆರ್ಕಾಟ್ ರಾಮಸ್ವಾಮಿ ಅವರು ಹಲವು ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಸ್ಮರಿಸಿದರು.

ಅಠಾರ ಕಚೇರಿ(ಈಗಿನ ಹೈಕೋರ್ಟ್) ನಿರ್ಮಾಣವು ಅವರ ಕಾಲದಲ್ಲೇ ಆಗಿದ್ದು, ಬಿ.ಆರ್.ಮಾಣಿಕಂ ಮೊದಲಿಯಾರ್ ಅವರು ವಿಧಾನಸೌಧ, ವಾಣಿವಿಲಾಸ ಆಸ್ಪತ್ರೆ, ರಸಲ್ ಮಾರ್ಕೆಟ್ ಮತ್ತಿತರ ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಲವು ರಂಗದಲ್ಲಿ ಈ ಸಮುದಾಯದವರು ಸೇವೆ ಸಲ್ಲಿಸುತ್ತಿದ್ದು, ಈ ನಾಡಿಗೆ ಆಸ್ತಿಯಾಗಿದ್ದಾರೆ ಎಂದು ಬೊಮ್ಮಾಯಿ ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕ ಸುರೇಶ್‍ಕುಮಾರ್, ಮೊದಲಿಯಾರ್ ಸಂಘದ ಅಧ್ಯಕ್ಷ ನರಸಿಂಹನ್, ತಮಿಳುನಾಡಿನ ಶಾಸಕ ಮಾಣಿಕಂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.