ಸಂಗಾತಿ ವಿನಿಮಯ ಪ್ರಕರಣದಲ್ಲಿ ಕೇರಳದಲ್ಲಿ ಏಳು ಮಂದಿ ಬಂಧನ

Social Share

ತಿರುವನಂತಪುರಂ, ಜ.10- ಸಂಗಾತಿ ವಿನಿಮಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ದೇವರನಾಡು ಕೇರಳದಲ್ಲಿ ನಡೆದ ಈ ಅನೈತಿಕ ಚಟುವಟಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮುಂದುವರೆದ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಸ್ವಾಪ್ಪಿಂಗ್ ಚಟುವಟಿಕೆ ಭಾರತದಲ್ಲಿ ಅಂತರ್ಗತವಾಗಿತ್ತು. ಆದರೆ ಕೇರಳದಲ್ಲಿ ದೊಡ್ಡ ಜಾಲವೇ ಬಹಿರಂಗಗೊಳ್ಳುವ ಮೂಲಕ ಸಂಪ್ರದಾಯವಾದಿಗಳ ಕಣ್ಣು ಕೆಂಪು ಮಾಡಿದೆ.
ಕರುಕಚಲ್ ಪೊಲೀಸ್ ಠಾಣೆಗೆ ಇತ್ತೀಚೆಗೆ ಮಹಿಳೆಯೊಬ್ಬರು ತಮ್ಮ ಪತಿಯ ವಿರುದ್ಧ ದೂರು ನೀಡಿ, ಇತರರ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸುವಂತೆ ನನ್ನನ್ನು ಬಲವಂತ ಪಡಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಇದೇ ಮಾದರಿಯ ಪ್ರಕರಣಗಳು ಕಯಂಕುಲಂ ಪ್ರದೇಶದಲ್ಲೂ ವರದಿಯಾಗಿದ್ದವು.
ಪೊಲೀಸ್ ಅಧಿಕಾರಿಗಳ ಪ್ರಕಾರ ಈ ರೀತಿಯ ಗುಂಪು ಸಾಮಾಜಿಕ ಜಾಲತಾಣ ಬಳಸಿಕೊಂಡು ರಾಜ್ಯಾದ್ಯಂತ ಸಕ್ರಿಯವಾಗಿದೆ. ಮೊದಲು ಟೆಲಿಗ್ರಾಮ್ ಅಥವಾ ಮೆಸೆಂಜರ್ ಗ್ರೂಪ್‍ಗೆ ಸೇರಿಕೊಳ್ಳುತ್ತಾರೆ. ಅಲ್ಲಿಂದ ಒಬ್ಬರಿಗೊಬ್ಬರು ನಿರಂತರ ಸಂಪರ್ಕ ಸಾಧಿಸುತ್ತಾರೆ. ಮುಂದೆ ಅನೈತಿಕವಾದ ಸಂಗಾತಿ ವಿನಿಮಯ ಚಟುವಟಿಕೆಗಳು ನಡೆಯುತ್ತವೆ. ಮಹಿಳೆ ದೂರು ಆಧರಿಸಿ ಆಕೆಯ ಪತಿಯನ್ನು ಬಂಧಿಸಲಾಗಿದೆ.
ಈ ಚಟುವಟಿಕೆಯ ಹಿಂದೆ ದೊಡ್ಡ ಜಾಲವೇ ಇದೆ. ಸಂಗಾತಿ ವಿನಿಮಯ ಚರ್ಚೆ ನಡೆಯುತ್ತಿದ್ದ ಟೆಲಿಗ್ರಾಮ್ ನ ಒಂದು ಗುಂಪನ್ನು ಅಳಿಸಿ ಹಾಕಲಾಗಿದೆ. ಸುಮಾರು ಒಂದು ಸಾವಿರ ಜನ ಈ ಗುಂಪಿನಲ್ಲಿ ಸದಸ್ಯರಾಗಿದ್ದರು ಎಂದು ಹೇಳಲಾಗಿದೆ.
ತನಿಖೆಯ ಬಗ್ಗೆ ಮಾಹಿತಿ ನೀಡಿರುವ ಚಂಗಂಚೆರ್ರಿಯ ಡಿವೈಎಸ್‍ಪಿ ಆರ್.ಶ್ರೀಕುಮಾರ್ ಅವರು, ಶಿಕ್ಷಿತ ಹಾಗೂ ಸುಧಾರಿತ ಕುಟುಂಬಗಳ ಸದಸ್ಯರೇ ಈ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಹಲವಾರು ಮಂದಿಯ ಪೈಕಿ 25 ಜನರ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ. ಈ ಆರೋಪಿಗಳು ಅಲ್ಪುಂ, ಕೊಟ್ಟಾಯಂ, ಎರ್ನಾಕುಲಂ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಈವರೆಗೂ ಏಳು ಮಂದಿಯನ್ನು ಬಂಧಿಸಲಾಗಿದೆ, ಶೀಘ್ರವೇ ಕೃತ್ಯದಲ್ಲಿ ತೊಡಗಿದ್ದವನ್ನು ಮತ್ತಷ್ಟು ಮಂದಿಯನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

Articles You Might Like

Share This Article