ಶಿಮ್ಲಾ, ಸೆ.26 – ಪ್ರವಾಸಿಗರಿದ್ದ ಟೆಂಪೋ ಟ್ರಾವೆಲರ್ ಕಮರಿಗೆ ಬಿದ್ದ ಪರಿಣಾಮ ಏಳು ಮಂದಿ ಸಾವನ್ನಪ್ಪಿ, 10 ಮಂದಿ ಗಾಯ ಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆ ಯಲ್ಲಿ ನಡೆದಿದೆ. ಮೃತಪಟ್ಟವರು ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ ಮತ್ತು ದೆಹಲಿ ಸೇರಿದವರಾಗಿದ್ದಾರೆ. ಬಂಜಾರ್ ಉಪವಿಭಾಗದ ಘಿಘಿ ಬಳಿ ಸ್ಥಳೀಯರು ಅಪಘಾತ ನೋಡಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.
ಕತ್ತಲಾಗಿದ್ದ ಕಾರಣ ಪರಿಹಾರ ಕಾರ್ಯಕ್ಕೆ ಅಡಚಣೆ ಉಂಟಾದರೂ ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಮೊದಲು ಬಂಜಾರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಕುಲು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಂಜಾನರ್ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದರ್ ಶೌರಿ ಹೇಳಿದ್ದಾರೆ.
7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಪ್ರವಾಸಿ ತಾಣಕ್ಕೆ ಹೋಗುವಾಗ ಕಣಿವೆಯ ತಿರುವು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಕಮರಿಗೆ ಟೆಂಪೋ ಉರುಳಿಬಿದ್ದಿದೆ ಎಂದು ತಿಳಿದುಬಂದಿದೆ.
ಶೌರಿ ಅವರು ಕೂಡ ಘಟನಾ ಸ್ಥಳಕ್ಕೆ ಧಾವಿಸಿ ಮಧ್ಯರಾತ್ರಿ 12.45ರ ಸುಮಾರಿಗೆ ತಮ್ಮ ಫೇಸ್ಬುಕ್ನಲ್ಲಿ ಕಾರ್ಯಾಚರಣೆಯ ಲೈವ್ ವೀಡಿಯೊವನ್ನು ಸ್ಟ್ರೀಮ್ ಮಾಡಿದ್ದಾರೆ. ಇದರಿಂದ ಜಿಲ್ಲಾಡಳಿತಕ್ಕೂ ಮಾಹಿತಿ ಸಿಕ್ಕಿದೆ. ಗಾಯಗೊಂಡಿದ್ದ ಹಲವರ ಜೀವ ಉಳಿಸುವಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯರು ನೆರವಾಗಿದ್ದಕ್ಕೆ ಶೌರಿ ಧನ್ಯವಾದ ತಿಳಿಸಿದ್ದಾರೆ.